Advertisement

ಶಿರೂರು ಮೀನುಗಾರನ ಬಿಡುಗಡೆ

04:08 AM Jan 30, 2019 | Team Udayavani |

ಬೈಂದೂರು: ಆರು ತಿಂಗಳಿಂದ ಇರಾನ್‌ನಲ್ಲಿ ಬಂಧಿತನಾಗಿದ್ದ ಶಿರೂರಿನ ಅಬ್ದುಲ್‌ ಮೊಹ್ಮದ್‌ ಹುಸೇನ್‌ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದು, ಸೋಮವಾರ ಶಿರೂರಿನ ಮನೆಗೆ ತಲುಪಿದ್ದಾರೆ.

Advertisement

ಕರಿಕಟ್ಟೆ ಸಮೀಪದ ಆರ್ಮಿ ಮೂಲದ ಮೊಹ್ಮದ್‌ ಹುಸೇನ್‌ 26 ವರ್ಷಗಳಿಂದ ದುಬಾೖಯಲ್ಲಿ ಮೀನುಗಾರಿಕಾ ಬೋಟ್‌ ಒಂದರಲ್ಲಿ ಕಲಾಸಿಯಾಗಿ ಕೆಲಸ ಮಾಡುತ್ತಿದ್ದರು. ಉ.ಕ. ಜಿಲ್ಲೆ ಮಂಕಿಯ 18 ಮಂದಿ ಹಾಗೂ ಮಹಾರಾಷ್ಟ್ರದ ರತ್ನಗಿರಿಯ 7 ಮಂದಿ ಸೇರಿದಂತೆ 24 ಮಂದಿ ಅವರಜತೆಗಿದ್ದರು. ಜುಲೈ 27ರಂದು ಅವರಿದ್ದ ಬೋಟ್‌ ಇರಾನ್‌ ಗಡಿ ಪ್ರವೇಶಿಸಿದೆ ಎಂದು ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಳಿಕ ದುಬಾೖ ಮುಸ್ಲಿಂ ಸಂಘಟನೆ, ಎನ್‌ಆರ್‌ಎಫ್‌ ಹಾಗೂ ನಮ್ಮ ಕುಂದಾಪ್ರ ಕನ್ನಡ ಬಳಗದ ಪ್ರಯತ್ನದ ಬಳಿಕ 18 ಜನರು ಬಂಧಮುಕ್ತರಾಗಿದ್ದರು. ಆದರೆ ಹುಸೇನ್‌ ಮತ್ತು ಉಳಿದವರ ಬಂಧನ ಮುಂದುವರಿದಿತ್ತು.

ಬೋಟ್‌ ಮಾಲಕ ಕೂಡ ನಮ್ಮ ಜತೆಗೆ ಮೀನುಗಾರಿಕೆಗೆ ಬಂದಿದ್ದ. ಇರಾನ್‌ ಗಡಿಗೆ 9 ಮೈಲಿ ದೂರದಲ್ಲಿದ್ದಾಗಲೇ ಅಲ್ಲಿನ ಪೊಲೀಸರು ನಮ್ಮನ್ನು ಬಂಧಿಸಿದರು. ಕೆಲವು ದಿನಗಳ ಹಿಂದೆ ಅಬುಧಾಬಿ ಸರಕಾರ ಇರಾನ್‌ನ 8 ಮೀನುಗಾರರನ್ನು ಬಂಧಿಸಿತ್ತು. ಅವರನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ನಮ್ಮನ್ನು ಬಂಧಿಸಲಾಗಿತ್ತು. ನಮ್ಮ ಬಂಧನದಿಂದ ದುಬಾೖ ಸರಕಾರ ಅಬುಧಾಬಿ ಮೇಲೆ ಒತ್ತಡ ಹೇರಿ ತಮ್ಮ ಮೀನುಗಾರರನ್ನು ಬಿಡುಗಡೆ ಮಾಡಬಹುದು ಎಂಬುದು ಇರಾನ್‌ನ ಗ್ರಹಿಕೆ  ಎನ್ನುತ್ತಾರೆ ಹುಸೇನ್‌.

ನರಕಯಾತನೆ
ಬಂಧಿತರಲ್ಲಿ 8 ಮಂದಿಯನ್ನು ಬೋಟ್‌ನಲ್ಲೇ ಇರಿಸಿ ಉಳಿದವರನ್ನು ಜೈಲಿಗೆ ಕಳುಹಿಸಿದ್ದರು. ದೋಣಿಯಲ್ಲಿ
ರುವವರಿಗೆ ದಿನದ 24 ಗಂಟೆಯೂ ಪೋಲಿಸ್‌ ಕಾವಲು ಇತ್ತು. ರಾತ್ರಿ ವೇಳೆ ನಿದ್ರಿಸುತ್ತಿದ್ದಾಗಲೂ ಎಬ್ಬಿಸಿ ಲೆಕ್ಕ ಮಾಡುತ್ತಿದ್ದರು. ಮೊಬೈಲ್‌ಗ‌ಳನ್ನು ಕಸಿದುಕೊಂಡಿದ್ದರು. ಆದರೂ ಕೆಲವು ಮೀನುಗಾರರು ಅಡಗಿಸಿಟ್ಟುಕೊಂಡಿದ್ದ ಮೊಬೈಲ್‌ ಮೂಲಕ ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು.

ಸಂಘಟಿತ ಪ್ರಯತ್ನಕ್ಕೆ ಜಯ
ಬಂಧಿತರು ಕಡು ಬಡವರು. ಕುಟುಂಬದವರು ಕಂಗೆಟ್ಟು ಹೋಗಿದ್ದರು.ಅವರ ನೋವಿಗೆ ಸ್ಪಂದಿಸಿದ ಕೆನರಾ ಮುಸ್ಲಿಂ ಅಸೋಸಿಯೇಶನ್‌ನ ಖಲೀಲ್‌ ಖಾನ್‌, ಅಬು ಮೊಹ್ಮದ್‌ ಮುಕ್ತಿ, ಎನ್‌ಆರ್‌ಐ ಅಧ್ಯಕ್ಷ ಪ್ರವೀಣ
ಕುಮಾರ್‌ ಶೆಟ್ಟಿ, ಶಿರೂರು ಅಸೋಸಿಯೇಶನ್‌, ಭಟ್ಕಳ ತಂಜೀಮ್‌ ಮುಂತಾದ ಸಂಘಟನೆ ಪ್ರಮುಖರು ಉಭಯ ಸರಕಾರಗಳ ಮೇಲೆ ಒತ್ತಡ ತಂದು ಬಳಿಕ ಮೀನುಗಾರರನ್ನು ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯ ಗ್ರಾ.ಪಂ. ಸದಸ್ಯ ಮುಕ್ರಿ ಅಲ್ತಾಫ್‌ ತಿಳಿಸಿದ್ದಾರೆ.

Advertisement

ನೀರು ಬೇಕಿದ್ದರೂ ಅತ್ತು ಕರೆಯಬೇಕು
ಜೈಲಿನ ಸ್ಥಿತಿ ಭೀಕರವಾಗಿತ್ತು. ಚಿಕ್ಕ ಕೋಣೆ, ಚಿಕ್ಕ ಶೌಚಾಲಯ. ಅದನ್ನೇ ಎಲ್ಲರೂ ಬಳಸಬೇಕಿತ್ತು. ಹೊರಗಡೆ ಎತ್ತರದ ಕಾಂಪೌಂಡ್‌ ಮಾತ್ರ. ಮೇಲ್ಛಾವಣಿ ಇಲ್ಲ. ಸರಿಯಾಗಿ ಕುಡಿಯುವ ನೀರನ್ನೂ ನೀಡುತ್ತಿರಲಿಲ್ಲ. ಹಲವು ಬಾರಿ ಅತ್ತು ಕರೆದ ಬಳಿಕ ಒಂದು ಗ್ಲಾಸ್‌ ನೀರು ನೀಡುತ್ತಿದ್ದರು. ಕೇವಲ 2 ಬ್ರೆಡ್‌ ನೀಡುತ್ತಿದ್ದರು. ಇಂತಹ ನರಕಯಾತನೆ ಯಾರಿಗೂ ಬಾರದಿರಲಿ ಎಂದು ಗದ್ಗದಿತರಾಗಿ ಹುಸೇನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next