Advertisement

“ಮೀನುಗಾರಿಕೆಯಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೇರಿಸುವ ಗುರಿ’

08:07 PM Jul 09, 2020 | Sriram |

ಕೋಟ: ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮೀನುಗಾರಿಕೆಯಲ್ಲಿ 3ನೇ ಸ್ಥಾನದಲ್ಲಿದೆ. ನನ್ನ ಅಧಿಕಾರವಧಿ ಮುಗಿಯುವ ಮುನ್ನ ಅದನ್ನು ಮೊದಲ ಸ್ಥಾನಕ್ಕೇರುವಂತೆ ಮಾಡಬೇಕು ಎನ್ನುವ ಗುರಿ ಇದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಜು.8ರಂದು ಹಂಗಾರಕಟ್ಟೆಯಲ್ಲಿ ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಫೆಡ್‌ರೇಶನ್‌ ಮತ್ತು ಹಂಗಾರಕಟ್ಟೆ ಕೋಡಿಬೆಂಗ್ರೆ ಯಾಂತ್ರೀಕೃತ ಮೀನುಗಾರರ ಸಂಘದ ಆಶ್ರಯದಲ್ಲಿ ನಡೆದ ಬೋಟ್‌ ಮಾಲಕರಿಗೆ ಪಡಿತರ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಜರ ಮೀನುಸಾಕಾಣಿಕೆಗೆ ಒತ್ತು
ಕೋವಿಡ್‌ ಹೊಡೆತದಿಂದ ಪರ ಊರಿ ನಲ್ಲಿರುವ ಸಾವಿರಾರು ಮಂದಿ ಮೀನುಗಾರರು ಉದ್ಯೋಗವಿಲ್ಲದೆ ಹುಟ್ಟೂರಿನ ಕಡೆಗೆ ಆಗಮಿಸುತ್ತಿದ್ದಾರೆ. ಇಂತವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪಂಜರ ಮೀನು ಸಾಕಾಣಿಕೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಇಲಾಖೆಯ ಮುಂದಿದ್ದು ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಹಾಗೂ ಜನವರಿಯಿಂದ ಮಾರ್ಚ್‌ ತನಕದ ಮೀನುಗಾರಿಕೆ ಡಿಸೀಲ್‌ ಸಬ್ಸಿಡಿ ಬಿಡುಗಡೆಗೊಂಡಿದೆ ಎಂದರು.

ದ.ಕ., ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡ್‌ರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಮಾತನಾಡಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆಡಳಿತಾವಧಿಯಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ ಹಾಗೂ ಇನ್ನಷ್ಟು ಉತ್ತಮ ಯೋಜನೆಗಳು ಅವರಲ್ಲಿದೆ ಎಂದರು.

ಈ ಸಂದರ್ಭ ಸುಮನಾರು 45ಕ್ಕೂ ಹೆಚ್ಚು ಬೋಟ್‌ ಮಾಲೀಕರಿಗೆ ಪಡಿತರ ಕಿಟ್‌ ವಿತರಣೆ ನಡೆಯಿತು. ಯಾಂತ್ರೀಕೃತ ಮೀನುಗಾರರ ಸಂಘದ ಅಧ್ಯಕ್ಷ ಬಿ.ಬಿ.ಕಾಂಚನ್‌, ಮಲ್ಪೆ ಯಾಂತ್ರೀಕೃತ ಮೀನು ಗಾರರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್‌, ಫೆಡ್‌ರೇಶನ್‌ ನಿರ್ದೇಶಕರಾದ ಸುರೇಶ್‌ ಸಾಲಿಯಾನ್‌, ಸುಧಾಕರ್‌, ಐರೋಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಬೇಬಿ ಎಸ್‌. ಸಾಲ್ಯಾನ್‌ ಉಪಸ್ಥಿತರಿದ್ದರು. ಫೆಡ್‌ರೇಶನ್‌ ಅಧ್ಯಕ್ಷರ ಆಪ್ತಸಹಾಯಕ ಯತೀಶ್‌ ಕೋಟ್ಯಾನ್‌ ನಿರೂಪಿಸಿದರು.

Advertisement

ಹೂಳೆತ್ತಲು ಮನವಿ
ಕೋಡಿಬೆಂಗ್ರೆ ಮೀನುಗಾರಿಕೆ ಜಟ್ಟಿಯ ಅಳಿವೆಯಲ್ಲಿ ಹೂಳು ಶೇಖರಣೆಯಾಗಿದ್ದು ಬೋಟ್‌ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ತೆರವುಗೊಳಿಸಲು ತಗಲುವ ಮೊತ್ತದ ಕುರಿತು ಈಗಾಗಲೇ ಅಂದಾಜು ಪಟ್ಟಿಯನ್ನು ರವಾನಿಸಿದ್ದು ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಬಿ.ಬಿ. ಕಾಂಚನ್‌ ಅವರು ಸಚಿವರಿಗೆ ಮನವಿ ಮಾಡಿದರು. ಈ ಕುರಿತು ಶೀಘ್ರದಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next