ಬಾಗಲಕೋಟೆ: ಜಿಲ್ಲೆಯ ಸವಳು-ಜವಳು ಭೂಮಿ ಗುರುತಿಸಿ ಮೀನು ಕೃಷಿ ಕೈಗೊಳ್ಳುವ ಮೂಲಕ ಆ ಭೂಮಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಮುಜರಾಯಿ, ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದು, ಜಿಲ್ಲೆಯಲ್ಲಿರುವ ಪ್ರತಿ ಮತಕ್ಷೇತ್ರಕ್ಕೆ 200 ಕಿಸಾನ್ ಕಾರ್ಡ್ ವಿತರಿಸಬೇಕು. ಈ ಕಾರ್ಡ್ ಮೂಲಕ 3 ಲಕ್ಷ ಮಿತಿಗೆ ಒಳಪಟ್ಟು ಶೂನ್ಯ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಕೆಲಸವಾಗಬೇಕು ಎಂದರು.
ಮಹಿಳಾ ಮೀನು ಕೃಷಿ ರೈತರಿಗೆ ಶೂನ್ಯ ದರದಲ್ಲಿ 50 ಸಾವಿರ ರೂ. ಸಾಲ ವಿತರಿಸಲಾಗುತ್ತಿದೆ. ಜಿಲ್ಲೆಯ ಮಹಿಳಾ ಮೀನುಗಾರರಿಗೆ ಈ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು. ಕಿಸಾನ್ ಕಾರ್ಡ್‌ಗಾಗಿ ಬಂದ 400 ಅರ್ಜಿ ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಕಿಸಾನ್ ಕಾರ್ಡ್ ಇದ್ದವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಿಸಬೇಕು. ಜಿಲ್ಲೆಯಲ್ಲಿ 150 ಕೆರೆಗಳನ್ನು ನರೇಗಾದಡಿ ಅಭಿವೃದ್ಧಿಪಡಿಸಬೇಕೆಂದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಜಿಲ್ಲೆಯಲ್ಲಿ 1163 ಸಿ ದರ್ಜೆ, 3 ಬಿ ದರ್ಜೆ, ದೇವಸ್ಥಾನಗಳಿದ್ದು, ಸಿ ದರ್ಜೆ, ಪ್ರತಿ ದೇವಸ್ಥಾನಗಳಿಗೆ ಗ್ರಾಮ ಮಟ್ಟದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಡಳಿತಾಧಿಕಾರಿಗಳು ಪ್ರತಿ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದೆಯೋ ಇಲ್ಲವೋ, ವ್ಯಾಪ್ತಿ ಎಷ್ಟು ಇದೆ, ಪೂಜೆ ಮಾಡುತ್ತಿರುವ ಅರ್ಚಕರು ಸೇರಿದಂತೆ ಇತರೆ ಮಾಹಿತಿ ಒಂದು ವಾರದಲ್ಲಿ ಕಲೆ ಹಾಕಿ ವರದಿ ಸಲ್ಲಿಸುವಂತೆ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳು ಮುಗಳುಗಡೆಯಾಗಿದ್ದು, ಅವುಗಳ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ದೇವಸ್ಥಾನಗಳನ್ನು
ಮೇಲ್ದರ್ಜೆಗೇರಿಸಲು, ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ತಿಳಿಸಿದರು. ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಎಚ್. ಬಾಂಗಿ, ನಿಜಶರಣ ಚೌಡಯ್ಯ, ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ತಿಪ್ಪೆಸ್ವಾಮಿ ಇತರರು ಇದ್ದರು.