Advertisement

ರಸ್ತೆಗೆ ಮೀನಿನ ತ್ಯಾಜ್ಯ ನೀರು: ತಡೆಗೆ ಕ್ರಮ

05:48 AM Jan 23, 2019 | Team Udayavani |

ಮಹಾನಗರ: ಹೊರ ರಾಜ್ಯಗಳಿಗೆ ಮತ್ತು ಮೀನಿನ ಕಾರ್ಖಾನೆಗಳಿಗೆ ಮೀನು ಸರಬರಾಜು ಮಾಡುವ ವಾಹನಗಳಿಂದ ರಸ್ತೆಗಳಿಗೆ ಬೀಳುವ ತ್ಯಾಜ್ಯ ನೀರಿನಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Advertisement

ಈ ಸಂಬಂಧ ಮೀನಿನ ತ್ಯಾಜ್ಯ ನೀರು ರಸ್ತೆಗೆ ಬೀಳದಂತೆ ಪರ್ಯಾಯ ವ್ಯವಸ್ಥೆ ರೂಪಿಸಲು ಈಗಾಗಲೇ ಸಮಿತಿಯೊಂದನ್ನು ಜಿಲ್ಲಾಧಿಕಾರಿ ರಚಿಸಿದ್ದು, ಈ ಸಮಿತಿಗಳಿಗೆ ವಿವಿಧ ಮೀನಿನ ಕಾರ್ಖಾನೆಗಳ ಮಾಲಕರ ಅಭಿಪ್ರಾಯ, ಗೋವಾದಲ್ಲಿ ಇದಕ್ಕೆ ರೂಪಿಸಿರುವ ಪರ್ಯಾಯ ಮಾರ್ಗದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸೂಚಿಸಿದೆ.

ರಸ್ತೆ ಮೂಲಕ ಮೀನು ಸಾಗಾಟ ಮಾಡಿದಾಗ ಅದರ ತ್ಯಾಜ್ಯ ನೀರು ರಸ್ತೆಯಲ್ಲಿ ಚೆಲ್ಲಿ ಪರಿಸರ ಮಾಲಿನ್ಯ, ಇತರ ವಾಹನಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.

ಮೀನಿನ ಲಾರಿಗಳು ನಿರಾತಂಕವಾಗಿ ಗಲೀಜು ನೀರನ್ನು ರಸ್ತೆಯಲ್ಲಿಯೇ ಚೆಲ್ಲುವ ಪರಿಪಾಠ ಮಾಮೂಲಿಯಾಗಿದೆ. ಮೀನಿನ ಲಾರಿಗಳ ಇಂತಹ ವರ್ತನೆಯಿಂದಾಗಿ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿ ಸುತ್ತಿದ್ದಾರೆ. ಗೋವಾ, ಕರ್ನಾಟಕ, ಕೇರಳದವರೆಗಿನ ಕರಾವಳಿ ಭಾಗದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಹೇರಿಕೊಂಡು ಲಾರಿಗಳು ಸಂಚರಿಸುತ್ತಿವೆ. ಅದರಲ್ಲೂ ಮಂಗಳೂರು ಧಕ್ಕೆಯ ಮೂಲಕವಾಗಿ ಕೇರಳ ಕಡೆಗೆ ಸಂಚರಿಸುವ ಮೀನಿನ ಲಾರಿ-ಟೆಂಪೋಗಳು ಪಾಂಡೇಶ್ವರ- ಮಂಗಳಾದೇವಿ- ಮೋರ್ಗನ್‌ಗೇಟ್- ಜಪ್ಪು ಮೂಲಕವಾಗಿ ಹೆದ್ದಾರಿಗೆ ಪ್ರವೇಶ ಪಡೆಯುತ್ತವೆ. ಅವುಗಳು ರಸ್ತೆಯಲ್ಲಿ ಸಂಚರಿಸುವ ವೇಳೆಯೇ ಮೀನಿನ ಗಲೀಜು ನೀರನ್ನು ರಸ್ತೆಗೆ ಬಿಡುತ್ತಿವೆ. ಪೊಲೀಸ್‌ ಇಲಾಖೆ ಈ ಬಗ್ಗೆ ಎಷ್ಟೇ ಕಾನೂನು ಕ್ರಮದ ಬಗ್ಗೆ ಉಲ್ಲೇಖೀಸಿದರೂ ಇದು ಪೂರ್ಣವಾಗಿ ನಿಂತಿಲ್ಲ. ಅದಕ್ಕಾಗಿ ಉಳ್ಳಾಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಐದು ಮೀನಿನ ಎಣ್ಣೆ ಘಟಕಗಳಿಗೆ ಬಾರ್ಜ್‌ ಮೂಲಕ ಮೀನು ಸಾಗಾಟ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಗೋವಾದಲ್ಲಿ ಕಟ್ಟುನಿಟ್ಟಿನ ಕ್ರಮ
ಮೀನಿನ ಲಾರಿಗಳ ಸಂಚಾರಕ್ಕೆ ಕೇರಳ ದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸ ಲಾಗಿತ್ತು. ಹೆದ್ದಾರಿಯಲ್ಲಿ ಕೊಳಚೆ ನೀರನ್ನು ಚೆಲ್ಲಿದರೆ ಅಂತಹ ವಾಹನದ ಚಾಲಕನ ಪರವಾನಿಗೆಯನ್ನೇ ಅಮಾನತುಪಡಿಸಿ ವಾಹನವನ್ನು ಮುಟ್ಟು ಗೋಲು ಹಾಕಿಕೊ ಳ್ಳುವ ಅವಕಾಶವೂ ಅಲ್ಲಿದೆ. ಆದರೆ, ಪ್ರಸ್ತುತ ಈ ಕಾನೂನು ಕೇರಳದಲ್ಲೂ ಕೂಡ ಕಟ್ಟುನಿಟ್ಟಾಗಿ ಜಾರಿ ಯಾಗುತ್ತಿಲ್ಲ. ಗೋವಾ ದಲ್ಲಿ ಮೀನನ್ನು ಮುಚ್ಚಿದ ಕಂಟೈನರ್‌ನಲ್ಲಿ ಸಾಗಾಟ ಅಥವಾ ಮೀನಿನ ತ್ಯಾಜ್ಯದ ನೀರನ್ನು ಪೈಪ್‌ ಮೂಲಕ ಶೇಖರಣೆ ಮಾಡಲಾಗುತ್ತದೆ. ರಸ್ತೆಯಲ್ಲಿ ನೀರು ಚೆಲ್ಲಿದರೆ ಸಂಬಂಧಪಟ್ಟ ವಾಹನ ಚಾಲಕನ ಮೇಲೆ ದಂಡ ಹಾಕುವ ಕಾನೂನು ಜಾರಿಯಲ್ಲಿದೆ. ಆದರೆ ಮಂಗಳೂರು ವ್ಯಾಪ್ತಿಯಲ್ಲಿ ಇಂತಹ ಕಾನೂನು ಸೂಕ್ತವಾಗಿ ಜಾರಿಯಾಗದ ಪರಿಣಾಮ ರಸ್ತೆಯಲ್ಲಿಯೇ ಮೀನಿನ ಗಲೀಜು ನೀರು ಹರಿಯುತ್ತಿದೆ.

Advertisement

ಗೋವಾ ಕ್ರಮ: ಅಧ್ಯಯನ 
ಮೀನುಗಾರಿಕಾ ಕಾಲೇಜಿನ ನಿರ್ದೇಶಕ, ಪರಿಸರ ಅಭಿ ಯಂತರು ಸೇರಿದ ಕಮಿಟಿಯು ಈಗಾಗಲೇ ಗೋವಾದಲ್ಲಿ ಅಳವಡಿಸಿರುವ ಕ್ರಮವನ್ನು ಅಧ್ಯಯನ ನಡೆಸಿದೆ. ಇನ್ನೆರಡು ವಾರಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೆರಡು ವಾರಗಳಲ್ಲಿ ಕ್ರಮ
ಮೀನಿನ ತ್ಯಾಜ್ಯದ ನೀರು ರಸ್ತೆಗೆ ಬಿಡುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ಗೋವಾದಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಪರಿಶೀಲಿಸಿದ್ದಾರೆ. ಅಧ್ಯಯನ ವರದಿ ಪರಿಶೀಲಿಸಿ ಇನ್ನೆರಡು ವಾರಗಳಲ್ಲಿ ಆದೇಶ ನೀಡಲಾಗುತ್ತದೆ.
– ಶಶಿಕಾಂತ್‌ ಸೆಂಥಿಲ್‌ ,
ಜಿಲ್ಲಾಧಿಕಾರಿ

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next