Advertisement
ಮಂಗಳೂರು ಸೇರಿದಂತೆ ಇತರ ಬಂದರಿನಿಂದ ಮೀನುಗಾರಿಕೆಗೆ ತೆರಳುವ ಹೆಚ್ಚಿನ ಮೀನುಗಾರರು ತಮಿಳುನಾಡು ಮೂಲದವರು. ಸದ್ಯ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ನಡೆಯುತ್ತಿದ್ದು, ಇವರು ಹಬ್ಬಕ್ಕೆಂದು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದಾಗಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಶೇ. 50ಕ್ಕೂ ಹೆಚ್ಚಿನ ಬೋಟ್‌ಗಳು ಬಂದರಿನಲ್ಲಿಯೇ ಲಂಗರು ಹಾಕಿವೆ.
ನಗರದ ಬಂದರಿಗೆ ಸಾಮಾನ್ಯ ದಿನಗಳಲ್ಲಿ ಸುಮಾರು 200 ಟನ್ ಮೀನು ಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು 130 ಟನ್ ಮೀನುಗಳು ಮಾತ್ರ ಬರುತ್ತಿವೆ. ಒಂದೆಡೆ ಮೀನುಗಾರರ ಅಲಭ್ಯ ಇದ್ದರೆ ಮತ್ತೂಂದೆಡೆ, ಚಳಿಗಾಲದಿಂದಾಗಿ ಮೀನುಗಳು ಸಮುದ್ರದ ಆಳಕ್ಕೆ ಇಳಿಯುತ್ತಿವೆ. ಇದರಿಂದಾಗಿ ಮೀನು ಬಲೆಗೆ ಬೀಳುವುದಿಲ್ಲ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಕಾರ ಇನ್ನೂ ಎರಡು ತಿಂಗಳುಗಳ ಕಾಲ ಸಮುದ್ರದಲ್ಲಿ ಮೀನಿನ ಕೊರತೆ ಉಂಟಾಗಲಿದೆ. ನಗರದ ಬಂದರಿನ ಹೆಚ್ಚಿನ ಬೋಟ್‌ಗಳು ಆಳ ಸಮುದ್ರದ ಮೀನು ಗಾರಿಕೆಗೆಂದು ಮಹಾರಾಷ್ಟ್ರದ ಕಡೆಗೆ ತೆರಳುತ್ತವೆ. ಈ ಬೋಟ್‌ಗಳು 11 ದಿನಗಳ ಬಳಿಕ ಬರುವ ಸಮಯದಲ್ಲಿ ಒಂದು ಬೋಟ್‌ನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದಷ್ಟು ಮೀನುಗಳನ್ನು ಹೊತ್ತು ತರುತ್ತವೆ. ಆದರೆ ಇತ್ತೀಚೆಗೆ ಆಳ ಸಮುದ್ರದಲ್ಲಿ ಬೋಟ್ ನಾಪತ್ತೆ ಬಳಿಕ ಮಹಾರಾಷ್ಟ್ರ ರಾಜ್ಯದತ್ತ ಮೀನುಗಾರರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.
Related Articles
Advertisement
ಮಹಾರಾಷ್ಟ್ರ ಕಡೆ ಮೀನುಗಾರಿಕೆಗೆ ತೆರಳಲು ಹಿಂದೇಟುಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ನಡೆಸುವ ಬೋಟ್‌ಗಳ ಸಂಖ್ಯೆ ಕಡಿಮೆ ಇದೆ. ಆ ಕಡೆಗೆ ಮೀನುಗಾರಿಕೆಗೆ ತೆರಳಿದರೆ ಹೆಚ್ಚಿನ ಮೀನುಗಳು ಸಿಗುತ್ತದೆ. ಇತ್ತೀಚೆಗೆ ಮಲ್ಪೆಯಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮತ್ತು ಮೀನುಗಾರರು ನಾಪತ್ತೆಯಾದ ಕಾರಣದಿಂದಾಗಿ ಇಲ್ಲಿನ ಮೀನುಗಾರರು ಮಹಾರಾಷ್ಟ್ರ ಕಡೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮೀನು ದರ ಜಾಸ್ತಿಯಾಗಲು ಇದು ಕೂಡ ಒಂದು ಕಾರಣ ಎನ್ನುತ್ತಾರೆ. ಮೀನಿನ ದರ ಹೆಚ್ಚಳ
ನಗರದಲ್ಲಿ ಕಳೆದ ಎರಡು ವಾರಗಳಿಗೆ ಹೋಲಿಕೆ ಮಾಡಿ ದರೆ ಮೀನುಗಳ ದರದಲ್ಲಿ ಭಾರೀ ಏರಿಕೆಯಾಗಿದೆ. ಈ ಹಿಂದೆ ಒಂದು ಕೆ.ಜಿ.ಗೆ 600 ರೂ. ಇದ್ದ ಅಂಜಲ್ ಮೀನಿಗೆ ಸದ್ಯ 1,000 ರೂಪಾಯಿ. ಈ ಹಿಂದೆ ಕೆ.ಜಿ.ಗೆ 150 ರೂ. ಇದ್ದ ಬಂಗುಂಡೆ ಮೀನಿಗೆ ಸದ್ಯ 250 ರೂ., ಈ ಹಿಂದೆ ಒಂದು ಬೂತಾಯಿ ಮೀನಿಗೆ ಸುಮಾರು 5-6 ರೂ. ಇತ್ತು. ಇದೀಗ 13 ರೂ.ಗೆ ಏರಿಕೆಯಾಗಿದೆ. ಮೀನುಗಳ ಲಭ್ಯತೆ ಕಡಿಮೆ
ಮೀನುಗಾರರು ಪೊಂಗಲ್ ಹಬ್ಬಕ್ಕೆಂದು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಳ ದರ ಏರಿಕೆಯಾಗುವ ಸಾಧ್ಯತೆಯಿದೆ. ಕೆಲವು ಮೀನುಗಾರರು ಇನ್ನೂ ಮೂರ್‍ನಾಲ್ಕು ದಿನಗಳ ಕಾಲ ತಮ್ಮ ಊರಿನಲ್ಲೇ ಇರಲಿದ್ದು, ಇದರಿಂದಾಗಿ ಬಂದರಿಗೆ ಬರುವ ಮೀನುಗಳ ಲಭ್ಯತೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
– ವಾಸುದೇವ ಬೋಳೂರು,
ನ್ಯಾಶನಲ್ ಫಿಶ್ ವರ್ಕರ್ ಫಾರಂ ಉಪಾಧ್ಯಕ್ಷ •ನವೀನ್ ಭಟ್ ಇಳಂತಿಲ