Advertisement
ಇಲ್ಲಿನ ನಳಂದಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದುಸ್ಥಿತಿಯಿದು. ಇದು ಬಿಹಾರದ ಎರಡನೇ ಅತಿದೊಡ್ಡ ಸರ್ಕಾರಿ ಆಸ್ಪತ್ರೆ. 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಆಸ್ಪತ್ರೆಯಲ್ಲಿ ಸುಮಾರು 750 ಬೆಡ್ ಗಳಿವೆ. ಭಾರೀ ಮಳೆಯಿಂದಾಗಿ ಆಸ್ಪತ್ರೆಯೊಳಗೆ ನೀರು ನುಗ್ಗಿರುವ ಕಾರಣ, ರೋಗಿಗಳನ್ನು ನೋಡಿಕೊಳ್ಳುತ್ತಿರುವ ಸಂಬಂಧಿಕರು ರಾತ್ರಿಯಿಡೀ ನೀರಿನಲ್ಲಿ ನಿಂತೇ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ, ವಿದ್ಯುತ್ ಆಘಾತದ ಭೀತಿಯೂ ಸೃಷ್ಟಿಯಾಗಿದ್ದು, ಪ್ರಮುಖ ಯಂತ್ರಗಳನ್ನು ಸ್ವಿಚ್ ಆಫ್ ಮಾಡಲಾಗಿದೆ.
ಇನ್ನೊಂದೆಡೆ, ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ, ದೆಹಲಿಯಲ್ಲಿ ತಗ್ಗುಪ್ರದೇಶಗಳ ಜನರ ಸ್ಥಳಾಂತರ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ರವಿವಾರ ಬೆಳಗ್ಗೆ ಸುಮಾರು ಒಂದು ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಸಂತ್ರಸ್ತರ ನೆರವಿಗೆಂದು ಶಿಬಿರಗಳನ್ನೂ ನಿರ್ಮಿಸಲಾಗಿದೆ. ಸಿಎಂ ಕೇಜ್ರಿವಾಲ್ ಹಾಗೂ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಪರಿಸ್ಥಿತಿ ಪರಿಶೀಲಿಸಿದ್ದು, ಸಂತ್ರಸ್ತರ ನೆರವಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಉತ್ತರಪ್ರದೇಶದಲ್ಲಿ ಮಳೆ ಸಂಬಂಧಿ ದುರಂತಗಳು ಮುಂದುವರಿದಿದ್ದು, ಗುರುವಾರದಿಂದ ಈವರೆಗೆ ಒಟ್ಟು 69 ಮಂದಿ ಅಸುನೀಗಿದ್ದಾರೆ.