Advertisement

ನಮ್ಮ ಮೀನು ತಡೆದರೆ ಗೋವಾದ್ದನ್ನೂ ಬಿಡೆವು

09:31 AM Nov 12, 2018 | |

ಕುಂದಾಪುರ: ಕರ್ನಾಟಕದ ಮೀನಿಗೆ ಗೋವಾ ಸರಕಾರ ನಿಷೇಧ ಹೇರಿರುವುದಕ್ಕೆ ಪ್ರತಿ ಯಾಗಿ ಇಲ್ಲೂ ಅಲ್ಲಿನ ಮೀನನ್ನು ನಿಷೇಧಿಸಬೇಕು, ಕಾರವಾರದ ಮೂಲಕ ಗೋವಾದ ಮೀನು ಕೇರಳಕ್ಕೆ ರವಾನೆಯಾಗುವುದನ್ನು ತಡೆಯ ಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಇಲ್ಲಿನ ಮೀನುಗಾರರು ಸಂಘಟಿತ ಹೋರಾಟಕ್ಕೆ ಸಜ್ಜಾಗಿದ್ದಾರೆ. 
ರಾಜ್ಯದಿಂದ ರಫ್ತಾಗುವ ಮೀನಿಗೆ ಫಾರ್ಮಾಲಿನ್‌ ರಾಸಾಯನಿಕ ಬೆರೆಸು ತ್ತಾರೆ ಎನ್ನುವ ಕಾರಣ ನೀಡಿ ಗೋವಾ ಸರಕಾರ 6 ತಿಂಗಳ ನಿಷೇಧ ಹೇರಿದೆ. ಇದರಿಂದ ನಮ್ಮ ಮತ್ಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

Advertisement

ಗೋವಾ-ಕೇರಳ: ಶೇ. 60 ರಫ್ತು
ಗೋವಾದಿಂದ ಅತೀ ಹೆಚ್ಚು ಮೀನು ಕೇರಳಕ್ಕೆ ರಫ್ತಾಗುತ್ತಿದೆ. ಅದು ಕಾರವಾರಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ – ಮಂಗಳೂರು – ಕಾಸರಗೋಡು ಮೂಲಕ ಕೇರಳವನ್ನು ತಲುಪುತ್ತದೆ. ಇದನ್ನು ತಡೆದರೆ ಗೋವಾ ಸರಕಾರ ರಾಜ್ಯದ ಮೀನು ಆಮದಿಗೆ ಹೇರಿರುವ ನಿಷೇಧವನ್ನು ತೆರವು ಮಾಡುವ ಬಗ್ಗೆ ಮಾತುಕತೆಗೆ ಮುಂದಾಗಬಹುದು ಎನ್ನುವುದು ಗಂಗೊಳ್ಳಿಯ ಮೀನುಗಾರ ಮುಖಂಡ ರವಿಶಂಕರ್‌ ಅವರ ಅಭಿಪ್ರಾಯ. 

ಕುಸಿದ ಮೀನಿನ ದರ
ಗೋವಾ ಸರಕಾರ ಹೇರಿರುವ ನಿಷೇಧದಿಂದಾಗಿ ರಾಜ್ಯದ ಕರಾವಳಿ ಯಲ್ಲಿ ಹಿಡಿಯಲಾಗುವ ಎಲ್ಲ ಜಾತಿಯ ಮೀನುಗಳ ದರ ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಕೆಜಿಗೆ 200 -220 ರೂ. ಇರುತ್ತಿದ್ದ ಬಂಗುಡೆಗೆ ಈಗ 110 – 120 ರೂ., 100 ರೂ. ಇರುತ್ತಿದ್ದ ಬೂತಾಯಿಗೆ ಈಗ 60 ರೂ. ಇದೆ. 500 ರೂ.ಗಿಂತ ಹೆಚ್ಚಿದ್ದ ಅಂಜಲ್‌ ಈಗ 350 ರೂ.ಗೆ ಕೂಡ ಬಿಕರಿಯಾಗುತ್ತಿಲ್ಲ. 600 ರೂ.ಗಿಂತ ಜಾಸ್ತಿಯಿದ್ದ ಪಾಂಪ್ಲೆಟ್‌ (ಮಾಂಜಿ)ಗೆ ಈಗ 400 ರೂ. ಇದೆ.

ನಾವೇ ತಡೆಯುತ್ತೇವೆ
ಕರಾವಳಿ ಜಿಲ್ಲೆಗಳಿಂದ ಗೋವಾಕ್ಕೆ ಸುಮಾರು ಶೇ. 30ರಿಂದ 40ರಷ್ಟು ಮೀನು ರಫ್ತಾಗುತ್ತಿತ್ತು. ಗೋವಾದಿಂದ ಕೇರಳಕ್ಕೆ ಶೇ. 60ರಷ್ಟು ಮೀನು ರಫ್ತಾಗುತ್ತಿದೆ. ನಮ್ಮ ರಾಜ್ಯಕ್ಕೂ ಸಾಕಷ್ಟು ಆಮದಾಗುತ್ತಿದೆ. ರಾಜ್ಯ ಸರಕಾರ ಇದಕ್ಕೆ ತಡೆಯೊಡ್ಡುವ ಕ್ರಮ ಕೈಗೊಳ್ಳದಿದ್ದಲ್ಲಿ ಕರಾವಳಿಯ ಎಲ್ಲ ಭಾಗದ ಮೀನುಗಾರರು ಒಟ್ಟಾಗಿ ಕಾರವಾರದ ಮೂಲಕ ಕೇರಳಕ್ಕೆ ಮೀನು ಸಾಗಾಟ ಮಾಡುವ ಗೋವಾದ ವಾಹನಗಳನ್ನು ತಡೆಯುತ್ತೇವೆ. ನ. 12ರಂದು ರಾಜ್ಯ ಮೀನುಗಾರಿಕೆ ಇಲಾಖೆ ನಿರ್ದೇಶಕರು ಉಡುಪಿಗೆ ಭೇಟಿ ನೀಡಲಿದ್ದು, ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗುವುದು.
ಸತೀಶ್‌ ಕುಂದರ್‌,  ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರು.

ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next