ಒಂದು ಕೆರೆಯಲ್ಲಿ ಮೂರು ಮೀನುಗಳಿದ್ದವು. ಆ ಮೂರು ಮೀನುಗಳ ಆಲೋಚನೆಗಳೂ ಬೇರೆ ಬೇರೆ ರೀತಿ ಇದ್ದವು. ಮೊದಲನೆಯ ಮೀನು, ಮುಂದೆ ನಡೆಯಬಹುದಾದ ಘಟನೆಗೆ ಮುಂಚಿತವಾಗಿಯೇ ತಯಾರಾಗಿರುತ್ತಿತ್ತು. ಎರಡನೆಯ ಮೀನು, ಪರಿಸ್ಥಿತಿ ಬಂದಾಗ ಅದನ್ನು ಎದುರಿಸುತ್ತಿತ್ತು. ಮೂರನೆಯ ಮೀನಿದೆಯಲ್ಲ, ಘಟನೆ ನಡೆದಾಗಲೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಸುಮ್ಮನೆ ಇದ್ದುಬಿಡುತ್ತಿತ್ತು.
ಒಂದು ದಿನ, ಆ ಮೀನುಗಳು ಕೆಲವು ಬೆಸ್ತರು ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡವು. ಬೆಸ್ತರು ಮಾರನೆಯ ದಿನ ಈ ಕೆರೆಯಲ್ಲಿ ಬಲೆ ಹಾಕಿ ಮೀನುಗಳನ್ನು ಹಿಡಿಯುವ ಯೋಚನೆಯಲ್ಲಿದ್ದಾರೆಂದು ತಿಳಿಯಿತು.
ಆಗ ಮೊದಲನೆಯ ಮೀನು, “ಬೆಸ್ತರು ಬರುವುದಕ್ಕೆ ಮೊದಲೇ ನಾವಿಲ್ಲಿಂದ ಹೊರಟು ಹೋಗುವುದು ಒಳ್ಳೆಯದು’ ಎಂದಿತು. ಎರಡನೆಯ ಮೀನು, “ಬೆಸ್ತರು ಬಲೆ ಬೀಸಲಿ. ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ನನಗೆ ಗೊತ್ತು’ ಎಂದಿತು. “ನಮ್ಮ ಹಣೆಯಲ್ಲಿ ಏನಾಗಬೇಕೆಂದು ಬರೆದಿದೆಯೋ, ಅದೇ ಆಗುತ್ತೆ. ಆದ್ದರಿಂದ ನಾನಂತೂ ಎಲ್ಲೂ ಹೋಗುವುದಿಲ್ಲ’ ಎಂದಿತು ಮೂರನೆ ಮೀನು.
ಮೊದಲನೆಯ ಮೀನು ಉಳಿದಿಬ್ಬರ ಜತೆ ವಾದ ಮಾಡುತ್ತ ಕೂರಲಿಲ್ಲ. ಕೆರೆಯಿಂದ ಹರಿದುಹೋಗುತ್ತಿದ್ದ ಒಂದು ಸಣ್ಣ ಕಾಲುವೆಯ ಮೂಲಕ ಈಜಿಕೊಂಡು ಅದು ಹೊರಟು ಹೋಯಿತು. ಮಾರನೆಯ ದಿನ ಬೆಸ್ತರು ಬರುವ ಹೊತ್ತಿಗೆ ಮೊದಲನೆ ಮೀನು ಇನ್ನೊಂದು ಕೆರೆಯಲ್ಲಿ ನೆಲೆಸಿತ್ತು. ಎರಡನೆ ಮತ್ತು ಮೂರನೆಯ ಮೀನುಗಳು ಬಲೆಯಲ್ಲಿ ಸಿಕ್ಕಿಬಿದ್ದವು. ಎರಡನೆ ಮೀನು ಸತ್ತ ಹಾಗೆ ಬಿದ್ದುಕೊಂಡಿತು. ಸತ್ತಮೀನನ್ನು ಬೆಸ್ತರು ತೆಗೆದು ಕೆರೆಗೆ ಮತ್ತೆ ಬಿಸಾಡಿದರು. ಎರಡನೆಯ ಮೀನಿಗೂ ಅದೇ ಬೇಕಾಗಿತ್ತು. ಆದದ್ದು ಆಗಲಿ ಎಂದು ಸುಮ್ಮನೇ ಇದ್ದ ಮೂರನೆಯ ಮೀನು ಬೆಸ್ತರ ಆಹಾರವಾಯಿತು.
ಕೃಪೆ: ಓರಿಯೆಂಟಲ್ ಲಾಂಗ್‌ಮನ್