Advertisement

ಕೋಡಿ: ಬೂತಾಯಿ ಹಬ್ಬ ! 

08:48 AM Nov 15, 2018 | Team Udayavani |

ಕುಂದಾಪುರ: ಕೋಡಿ ಕಡಲ ಕಿನಾರೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಬೀಜಾಡಿಯ ಕರಾವಳಿ ಫ್ರೆಂಡ್ಸ್‌ನ ಕೈರಂಪಣಿ ಬಲೆಯ ದೋಣಿಗೆ ರಾಶಿ – ರಾಶಿಯಾಗಿ ಬೈಗೆ (ಬೂತಾಯಿ) ಮೀನುಗಳು ಸಿಕ್ಕಿವೆ. ಸುಮಾರು 3 ಸಾವಿರ ಕೆ.ಜಿ.ಯಷ್ಟು ಮೀನುಗಳು ಬಲೆಗೆ ಬಿದ್ದಿವೆ. ಎಳೆಯುವ ಸಂದರ್ಭ ಬಲೆ ಹರಿದ ಕಾರಣ ಅಷ್ಟೇ ಪ್ರಮಾಣದ ಮೀನುಗಳು ತಪ್ಪಿಸಿಕೊಂಡು ಹೋಗಿವೆ.

Advertisement

ಮುಗಿಬಿದ್ದ ಜನ
ಬೆಳಗ್ಗೆ 6.30ರ ಸುಮಾರಿಗೆ ಕೈರಂಪಣಿ ದೋಣಿಗೆ ಅಪಾರ ಪ್ರಮಾಣದ ಮೀನು ಸಿಕ್ಕಿದೆ ಎನ್ನುವ ಸುದ್ದಿ ಪರಿಸರದಲ್ಲಿ ಹಬ್ಬಿದ್ದು, ಮೀನು ಖರೀದಿಗಾಗಿ ಸ್ಥಳೀಯರು ಮುಗಿಬಿದ್ದರು. ದೋಣಿಯವರಿಗೆ ಸಿಕ್ಕಿದ ಮೀನುಗಳನ್ನು ಕೋಟದ ಫಿಶ್‌ಮೀಲ್‌ಗೆ ನೀಡಲಾಗಿದೆ. ದಡಕ್ಕೆ ಬಂದು ಬಿದ್ದ ಮೀನುಗಳನ್ನು ಸ್ಥಳೀಯರು ಹಂಚಿಕೊಂಡರು. ಬಲೆಯ ಸಾಮರ್ಥ್ಯಕ್ಕಿಂತ ಹೆಚ್ಚು ಮೀನು ಬಿದ್ದ ಕಾರಣ ಎಳೆಯುವಾಗ ತುಂಡಾಗಿ ಅರ್ಧದಷ್ಟು ಮೀನುಗಳು ಸಮುದ್ರಸೇರಿವೆ. ಬಳಿಕ ದೋಣಿಯಲ್ಲಿದ್ದ 16 ಮಂದಿಯೊಂದಿಗೆ ಸ್ಥಳೀಯ 50 ಮಂದಿ ಸೇರಿ ಬಲೆಯನ್ನು ದಡಕ್ಕೆ ಎಳೆದು ತಂದರು. ತಲಾ 40 ಕೆ.ಜಿ.ಯಂತೆ 54 ಬಾಕ್ಸ್‌ಗಳಲ್ಲಿ ಮೀನುಗಳನ್ನು ತುಂಬಿ ಮಾರಾಟ ಮಾಡಲಾಗಿದೆ. ಬಾಕ್ಸೊಂದಕ್ಕೆ 1 ಸಾವಿರ ರೂ. ನಿಗದಿ ಮಾಡಲಾಗಿತ್ತು. ದೋಣಿಯವರಿಗೆ 50-60 ಸಾವಿರ ರೂ. ಲಭಿಸಿದ್ದು, ಒಟ್ಟಾರೆಯಾಗಿ 1.25 ಲಕ್ಷ ರೂ. ಮೌಲ್ಯದ ಮೀನು ಸಿಕ್ಕಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಪಡುಬಿದ್ರಿ ಸಮೀಪದ ಹೆಜಮಾಡಿ ತೀರದಲ್ಲಿ ಭಾರೀ ಪ್ರಮಾಣದಲ್ಲಿ ಬೊಳಿಂಜೇರ್‌ (ಸಿಲ್ವರ್‌ ಫಿಶ್‌) ಮೀನುಗಳು ಕೈರಂಪಣಿ ಮೀನುಗಾರರಿಗೆ ಲಭಿಸಿದ್ದವು.

ಕಾರಣವೇನು ?
ಮೀನುಗಾರರ ಪ್ರಕಾರ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಬೂತಾಯಿ ಮೀನುಗಳು ದಡಕ್ಕೆ ಬಂದಿವೆ. ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ದೋಣಿಗಳ ಎಂಜಿನ್‌ ಶಬ್ದಕ್ಕೆ ಹೆದರಿ ಮೀನುಗಳು ಗುಂಪಾಗಿ ಹೋಗುತ್ತಿದ್ದು, ಅದೇ ವೇಳೆ ಅಲೆಗಳ ಅಬ್ಬರದಿಂದಾಗಿ ದಡದತ್ತ ತೇಲಿಬಂದಿರಬಹುದು ಎನ್ನುತ್ತಾರೆ ಅವರು.

ಆಶಾದಾಯಕ ಬೆಳವಣಿಗೆ
ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ಇದರ ಅರ್ಧದಷ್ಟು ಕೂಡ ಬೈಗೆ ಮೀನು ಸಿಗುತ್ತಿರಲಿಲ್ಲ. ಈ ವರ್ಷ ಬುಲ್‌ಟ್ರಾಲ್‌, ಲೈಟ್‌ ಫಿಶಿಂಗ್‌ ನಿಷೇಧಿಸಿರುವುದರಿಂದ ಮೀನಿನ ಮರಿಗಳೆಲ್ಲ ಉಳಿದು ಈಗ ಹೇರಳವಾದ ಮೀನು ಸಿಗುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. 
ಮಂಜು ಬಿಲ್ಲವ,  ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next