ಬೆಂಗಳೂರು: ಸಮುದ್ರ ಮತ್ತು ಒಳನಾಡು ಮೀನುಗಾರಿಕೆಯ ಸಮಗ್ರ ಅಭಿವೃದ್ದಿಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಕರಾವಳಿ ಯಲ್ಲಿ ವರ್ಷಕ್ಕೆ 2 ಬಾರಿ ಮೀನು ಕೃಷಿ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಮೀನುಗಾರಿಕೆ ಸಚಿವ ಅಂಗಾರ ಹೇಳಿದರು.
ಮೀನುಗಾರಿಕೆ ಇಲಾಖೆ ಸೋಮವಾರ ಕಬ್ಬನ್ ಪಾರ್ಕ್‌ನ ಮತ್ಸ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧುನೀಕರಣ ಕಾಮಗಾರಿಗಳ ಶಂಕುಸ್ಥಾಪನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯೋಗ ನೀತಿಯಲ್ಲಿ ಕೆಲವು ಬದಲಾವಣೆ: ಸಿಎಂ ಮೀನುಗಾರಿಕೆ ಕ್ಷೇತ್ರ ದೊಡ್ಡ ಉದ್ಯಮವಾಗಿ ಬೆಳೆಯುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಉದ್ಯೋಗ ನೀತಿಯಲ್ಲಿ ಕೆಲವು ಬದಲಾವಣೆ ತಂದು ಈ ವಲಯದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುವವರಿಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ ಒಂದು ಕೆರೆಯನ್ನು ಮೀನು ಸಾಕಣೆಗೆ ಮೀಸಲಿಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹತ್ತು ವರ್ಷಗಳಲ್ಲಿ ಒಳನಾಡು ಮೀನುಗಾರಿಕೆ ಆತಂಕಕ್ಕೆ ಸಿಲುಕಿಕೊಂಡಿದ್ದು, ಸ್ಪಷ್ಟವಾದ ನೀತಿಗಳು ಇಲ್ಲದೆ ಇರುವುದೇ ಇದಕ್ಕೆ ಕಾರಣ. ಸ್ಥಳೀಯರಿಗೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಸರಕಾರ ಒಳನಾಡು ಮೀನುಗಾರಿಕೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ನೀಡಲಿದೆ ಎಂದು ಹೇಳಿದರು.
ಹವಾ ನಿಯಂತ್ರಿತ ವಾಹನಗಳಲ್ಲಿ ಮೀನು ಮಾರಾಟ
ಮೀನು ಮಾರಾಟ ಹೆಚ್ಚಿಸಲು ಮೀನುಗಾರಿಕೆ ಇಲಾಖೆ ಹವಾ ನಿಯಂತ್ರಿತ ವಾಹನಗಳ ಮೂಲಕ ಮೀನು ಮಾರಾಟಕ್ಕೆ ಮುಂದಾಗಿದೆ. ಈ ವಿಶೇಷ ಯೋಜನೆಗೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಮೀನುಗಾರರಿಗೆ 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಮಂಗಳೂರಿನಲ್ಲಿ ಅಕ್ವೇರಿಯಂ
ಆಳ ಮೀನುಗಾರಿಕೆಗೆ ಸರಕಾರ ಒತ್ತು ನೀಡಿದ್ದು, ಸುಮಾರು 100 ಬೋಟ್‌ಗಳನ್ನು ನೀಡಲಿದೆ. ಜತೆಗೆ ಕರಾವಳಿಯ 8 ಬಂದರುಗಳಲ್ಲಿ ಹೂಳೆತ್ತುವ ಕೆಲಸ ನಡೆಯ ಲಿದೆ. ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಾರ್ವ ಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಹೇಳಿದರು.