Advertisement

ಕೋವಿಡ್‌ ವೇಳೆ ಕೈಹಿಡಿದ ಮತ್ಸ್ಯಗಂಧ

11:50 PM Oct 22, 2020 | mahesh |

ಬೆಳ್ತಂಗಡಿ: ಉದ್ಯಮ ಅಥವಾ ಉದ್ಯೋಗ ಆಯ್ಕೆಗಳು ಭಿನ್ನವಾದರೂ ಪರಿಶ್ರಮದಿಂದ ಯಶಸ್ಸು ಸಾಧ್ಯ. ಕೋವಿಡ್‌ ಹಲವರ ಬದುಕನ್ನು ಬದಲಿಸಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಪಾಡೆಂಕಿ ನಿವಾಸಿ ಅಶೋಕ್‌ ಪೂಜಾರಿ ಅವರ ಬದುಕನ್ನೂ ಬದಲಿಸಿದೆ. ಲಾಕ್‌ಡೌನ್‌ ಸಂದರ್ಭ ಅವರ ಕೈಹಿಡಿದದ್ದು ಮೀನು ವ್ಯಾಪಾರ. ಇಂದು ಅದೇ ವೃತ್ತಿ ಸಂತೃಪ್ತ ಜೀವನ ನೀಡಿದೆ.

Advertisement

ಇಳಂತಿಲ ಗ್ರಾಮದ ಪಾಡೆಂಕಿ ನಿವಾಸಿ ಹೊನ್ನಪ್ಪ ಪೂಜಾರಿ ಮತ್ತು ಯಶೋದಾ ದಂಪತಿಯ ಪುತ್ರ ಅಶೋಕ್‌. ತಮ್ಮ, ತಂಗಿಯೊಂದಿಗೆ ಕುಟುಂಬ ನಿರ್ವಹಣೆಯ
ಜವಾಬ್ದಾರಿ ಹೊತ್ತಿರುವ ಪದವೀಧರ. ಬಳಿಕ ಉದ್ಯೋಗ ಅರಸಿ ಬೆಂಗಳೂರಿಗೆ ಹೋದವರು ಸಿನೆಮಾ ರಂಗಕ್ಕೆ ಕಾಲಿಟ್ಟರು. 2006ರಲ್ಲಿ ಸಿನೆಮಾ ನಿರ್ಮಾಣ ವಿಭಾಗದಲ್ಲಿ ಸಹಾಯಕನಾಗಿ ವೃತ್ತಿ ಬದುಕು ಆರಂಭಿಸಿದರು. 2008ರಲ್ಲಿ ಟಾಟಾ ಮಳಿಗೆಯಲ್ಲಿ ಮಾರುಕಟ್ಟೆ ವಿಭಾಗ ಆಯ್ಕೆ ಮಾಡಿ ಕೊಂಡರು. ಅದೇ ಕಂಪೆನಿಯ ವಿಮಾ ಪ್ರತಿನಿಧಿಯೂ ಆಗಿದ್ದಾರೆ. ಮನೆಯಲ್ಲೇ ತಾಜಾ ಹಣ್ಣಿನ ಜ್ಯೂಸ್‌ ತಯಾರಿಸಿ ಮಾರಾಟ ನಡೆಸಿದ್ದರು. ಆದರೆ ಇದು ಯಾವುದೂ ಅವರ ಕೈಹಿಡಿಯಲಿಲ್ಲ.

ಕೈಹಿಡಿಯಿತು 10 ವರ್ಷ ಹಿಂದೆ ಕಂಡ ಕನಸು!
ಲಾಕ್‌ಡೌನ್‌ ಸಂದರ್ಭ ಅಶೋಕ್‌ ಅವರ ಬದುಕಿನ ಎಲ್ಲ ದಾರಿಗಳೂ ಮುಚ್ಚಿದಂತಾದವು. ಸಣ್ಣ ಜಮೀನು ಹೊಂದಿರುವ ಕುಟುಂಬಕ್ಕೆ ಅನ್ಯ ಆದಾ ಯದ ಮೂಲ ಇರಲಿಲ್ಲ. ಹೀಗಿರುವಾಗ 10 ವರ್ಷಗಳ ಹಿಂದೆ ಒಮ್ಮೆ ಯೋಚನೆ ಮಾಡಿದ್ದ ಮೀನು ವ್ಯಾಪಾರದ ವಿಚಾರ ನೆನಪಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತರಾದರು. ಮನೆ ಮಂದಿಯ ಸಮ್ಮತಿ ದೊರೆಯಿತು; ಸ್ನೇಹಿತರೂ ಬೆನ್ನಹಿಂದೆ ನಿಂತರು. ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಗ್ರಾ.ಪಂ. ಮಾರುಕಟ್ಟೆಯಲ್ಲಿ ಏಲಂ ಮೂಲಕ ಅಂಗಡಿ ಖರೀದಿಸಿದ್ದ ವ್ಯಕ್ತಿಯೊಬ್ಬರು ವ್ಯಾಪಾರ ನಡೆಸ ದ್ದರಿಂದ ಅಶೋಕ್‌ ಅವರು ಅದೇ ಅಂಗಡಿಯನ್ನು ಪಡೆದು “ಮತ್ಸಗಂಧ’ ನಾಮಕರಣ ದೊಂದಿಗೆ ವ್ಯವಹಾರ ಆರಂಭಿಸಿದರು.ಎಪ್ರಿಲ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಿದರು. ಆಗಸ್ಟ್‌ ವೇಳೆಗೆ ಗ್ರಾಹಕರ ಸಂಖ್ಯೆ ವೃದ್ಧಿಯಾಗಿತ್ತು.

ಮುಂಜಾನೆ 3ಕ್ಕೆ ಎದ್ದು ಮಲ್ಪೆ ಅಥವಾ ಮಂಗಳೂರು ದಕ್ಕೆಯಿಂದ ಮೀನುಗಳನ್ನು ಖರೀದಿಸಿ ತಂದು ಸಂಜೆವರೆಗೂ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ರಾಜೇಶ್‌ ಅವರ ಬೆಂಬಲವೂ ಇದೆ. ಆಟೋ ಓಡಿಸುವುದರೊಂದಿಗೆ ಬಿಡುವಿನ ವೇಳೆಯಲ್ಲಿ ಅಣ್ಣನಿಗೆ ಸಹಕರಿಸುತ್ತಿದ್ದಾರೆ.

ಕೆಲವು ಯುವಕರು ಶಿಕ್ಷಣ ವಂಚಿತರಾಗಿ ಯಾವ ಉದ್ಯೋಗ ಆಯ್ಕೆ ಮಾಡಬೇಕು ಎಂಬ ಚಿಂತೆಯಲ್ಲಿದ್ದರೆ, ಶಿಕ್ಷಣ ಪಡೆದ ಕೆಲವರು ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಕಾಣದೆ ಖನ್ನತೆಗೆ ಒಳಗಾಗುತ್ತಿದ್ದಾರೆ. ದೊಡ್ಡ ಹುದ್ದೆಗಳ ಆಕಾಂಕ್ಷೆ ಬೇಕು ನಿಜ. ಆದರೆ ಇರುವ ಉದ್ಯೋಗದಲ್ಲೇ ನೆಮ್ಮದಿ ಕಂಡುಕೊಳ್ಳುವುದು ನಮ್ಮ ಕೈಯಲ್ಲಿದೆ. ಇಂದು ನಮ್ಮ ಬಗ್ಗೆ ಆಡಿಕೊಂಡವರು ಮುಂದೆ ನಮ್ಮ ಬೆನ್ನು ತಟ್ಟುವಂತೆ ಆಗಬೇಕು. ಅದರಂತೆ ನಾನು ಯಾರ ಟೀಕೆಗೂ ತಲೆಕೆಡಿಸಿಕೊಳ್ಳದೆ ಶ್ರಮಪಟ್ಟು ಉದ್ಯೋಗ ನಿರ್ವಹಿಸು ತ್ತಿದ್ದೇನೆ. ಅದರಲ್ಲೇ ನೆಮ್ಮದಿ ಕಾಣುತ್ತಿದ್ದೇನೆ.
– ಅಶೋಕ್‌ ಪೂಜಾರಿ, ಪಾಡೆಂಕಿ

Advertisement

ಕೊರೊನಾ ತಂದಿತ್ತ ಸಂಕಷ್ಟವನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವವರ ಕುರಿತು ಈ ಅಂಕಣ. ನಿಮ್ಮ ಅಕ್ಕಪಕ್ಕದಲ್ಲಿ ಇಂಥವರಿದ್ದರೆ ನಮಗೆ ತಿಳಿಸಿ. ನಿಮಗೂ ತಿಳಿದಿದ್ದರೆ ಹೆಸರು, ಊರು, ಸಂಪರ್ಕ ಸಂಖ್ಯೆ, ವಿವರ ಕಳಿಸಿಕೊಡಿ. ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲೆಂದು
ಈ ಮಾಲಿಕೆ . ವಾಟ್ಸ್‌ಆ್ಯಪ್‌ ಸಂಖ್ಯೆ:  7618774529

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next