ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸರಿಯಾಗಿ ಅಭ್ಯಾಸ ನಡೆಸಲಾಗದೆ ಪರದಾಟ ನಡೆಸುತ್ತಿದ್ದ ರಾಜ್ಯದ ಅಥ್ಲೀಟ್ಸ್‌ಗಳಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಿಂದಾಲ್‌ನ ಕ್ಲಬ್ ಫುಟ್ಬಾಲ್ ಆಯೋಜಕರಿಗೆ ಕ್ರೀಡಾಂಗಣಕ್ಕೆ ಹಾಕಿರುವ ಬ್ಯಾರಿಕೇಡ್ ಅನ್ನು ಕೂಡಲೇ ತೆರವುಗೊಳಿಸಬೇಕು. ಅಥ್ಲೀಟ್‌ಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ರಾಜ್ಯ ಹೈಕೋರ್ಟ್ ಬುಧವಾರ ಆದೇಶಿಸಿದೆ. ಇದರಿಂದಾಗಿ ಒಪ್ಪಂದ ಅವಧಿ ಮುಗಿದಿದ್ದರೂ ಜಿಂದಾಲ್‌ಗೆ ಕ್ಲಬ್ ಫುಟ್‌ಬಾಲ್ ಚಟುವಟಿಕೆ ನಡೆಸಲು ಅನುಮತಿ ನೀಡಿದ್ದ ರಾಜ್ಯ ಯುವಸಬಲೀಕರಣ ಕ್ರೀಡಾ ಇಲಾಖೆಗೆ ಬಾರೀ ಮುಖಭಂಗವಾಗಿದೆ.
ನ್ಯಾಯಾಲಯ ಹೇಳಿದ್ದೇನು?: ಕಳೆದ ಕೆಲವು ವರ್ಷಗಳಿಂದ ಅಥ್ಲೀಟ್‌ಗಳ ಸಿಂಥೆಟಿಕ್ ಟ್ರ್ಯಾಕ್, ಅಭ್ಯಾಸ ವಲಯದಲ್ಲಿ ಜಿಂದಾಲ್‌ನ ಕ್ಲಬ್ ತಂಡ ಬೆಂಗಳೂರು ಎಫ್ಸಿ ಫುಟ್‌ಬಾಲ್ ಕಾರ್ಯ ಚಟುವಟಿಕೆ ನಡೆಸುತ್ತಿತ್ತು. ಕ್ರೀಡಾ ಇಲಾಖೆಗೆ ಜತೆಗಿನ ಒಪ್ಪಂದ ಅವಧಿ ಮುಗಿದಿದ್ದರೂ ಫುಟ್‌ಬಾಲ್ ಹಾವಳಿ ಬಹು ದಿನಗಳಿಂದ ಮುಂದುವರಿದಿತ್ತು. ಇದರಿಂದ ರಾಷ್ಟ್ರೀಯ ಅಥ್ಲೀಟ್‌ಗಳು ಬಾರೀ ಸಮಸ್ಯೆ ಎದುರಿಸಿದ್ದರು. ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್ವಾಲ್‌ಗೆ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ.
ದಿನೇ ದಿನೇ ದೈನಂದಿನ ಅಭ್ಯಾಸಕ್ಕೆ ಬಾರಿ ಕಷ್ಟವಾಗಿ ಪರಿಣಮಿಸಿತ್ತು. ಇದರ ವಿರುದ್ಧ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ, ಅರ್ಜುನ ಪ್ರಶಸ್ತಿ ವಿಜೇತ ಎಸ್‌ಡಿ.ಈಶಾನ್ ಹಾಗೂ ಕೋಚ್ ವಿ.ಆರ್.ಬೀಡು ಸೇರಿದಂತೆ ಒಟ್ಟು 17 ಕೋಚ್‌ಗಳು ಹಾಗೂ ರಾಷ್ಟ್ರೀಯ ಅಥ್ಲೀಟ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರ ವಿಚಾರಣೆಯನ್ನು ಎರಡು ದಿನಗಳ ಹಿಂದೆ ನಡೆಸಿದ್ದ ಹೈಕೋರ್ಟ್ ಕ್ರೀಡಾ ಇಲಾಖೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತ್ತು. ಈ ವಿಚಾರಣೆಯನ್ನು ಬುಧವಾರ ನಡೆಸಿದ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಕೂಡಲೇ ಅಥ್ಲೀಟ್‌ಗಳಿಗೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಎಲ್ಲ ರೀತಿಯಲ್ಲಿ ಅವಕಾಶ ನೀಡಬೇಕು. ಅಲ್ಲದೆ ಜಿಂದಾಲ್ ಕ್ಲಬ್ ಫುಟ್ಬಾಲ್‌ಗಾಗಿ ಹಾಕಿರುವ ಬ್ಯಾರಿಕೇಡ್ ಅನ್ನು ಕೂಡಲೇ ತೆಗೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಇದರಿಂದಾಗಿ ಅಥ್ಲೀಟ್‌ಗಳು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ.
“ಉದಯವಾಣಿ’ಯಿಂದ ಸರಣಿ ವರದಿ
“ಉದಯವಾಣಿ’ ಕಳೆದ ಕೆಲವು ತಿಂಗಳಿನಿಂದ ಕಂಠೀರವದಲ್ಲಿ ಅಥ್ಲೀಟ್‌ಗಳಿಗಾಗಿರುವ ಸಮಸ್ಯೆಗಳನ್ನು ಸರಣಿ ವರದಿ ಮಾಡುವುದರ ಮೂಲಕ ಗಮನ ಸೆಳೆದಿತ್ತು. ಕೋಚ್‌ಗಳು, ಅಥ್ಲೀಟ್‌ಗಳ ವಾಸ್ತವ ಸಮಸ್ಯೆ ಏನು ಎನ್ನುವುದನ್ನು ಜನರ ಮುಂದಿಟ್ಟಿತ್ತು. ಈ ಬೆನ್ನಲ್ಲೇ ಉಚ್ಚ ನ್ಯಾಯಾಲಯವೂ ಅಥ್ಲೀಟ್‌ಗಳ ಪರವಾಗಿಯೇ ತೀರ್ಪು ನೀಡಿದೆ.
ಮುಂದೆ ಕಾಮನ್ವೆಲ್ತ್, ಏಷ್ಯಾಡ್ ಕೂಟಗಳಿಗೆ ತಯಾರಿ ನಡೆಸಲಾಗದೆ ಕ್ರೀಡಾಪಟುಗಳು ತೀವ್ರ ಸಂಕಷ್ಟದಲ್ಲಿದ್ದರು. ನ್ಯಾಯಾಲಯದ ಆದೇಶದಿಂದ ಸ್ವಲ್ಪ ಸಮಾಧಾನ ಸಿಕ್ಕಿದೆ.
– ಅಶ್ವಿನಿ ನಾಚಪ್ಪ, ಮಾಜಿ ಅಥ್ಲೀಟ್
ನ್ಯಾಯಾಲಯದ ತೀರ್ಪಿನಿಂದ ಸಂತೋಷವಾಗಿದೆ. ನಾಳೆಯಿಂದಲೇ ನಮ್ಮ ಅಥ್ಲೀಟ್‌ಗಳಿಗೆ ಪೂರ್ಣವಾಗಿ ಅಭ್ಯಾಸ ನಡೆಸಲು ಸಾಧ್ಯವಾಗಲಿದೆ.
– ಎಸ್.ಡಿ.ಈಶಾನ್, ಮಾಜಿ ಅಥ್ಲೀಟ್, ಅರ್ಜುನ ಪ್ರಶಸ್ತಿ ಪುರಸ್ಕೃತ