ಅಬುಧಾಬಿ : ಜೆದ್ದಾದಲ್ಲಿ ಎರಡು ಸ್ಥಳೀಯ ತಂಡಗಳ ನಡುವಿನ ಫುಟ್ಬಾಲ್ ಪಂದ್ಯವನ್ನು ವೀಕಿಸಲು ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆಂಬಂತೆ ಸೌದಿ ಅರೇಬಿಯದ ಮಹಿಳೆಯರು ಸ್ಟೇಡಿಯಂ ಪ್ರವೇಶಿಸಿದ್ದಾರೆ.
ಕಿಂಗ್ ಅಬ್ದುಲ್ಲ ನ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿನ ಈ ಫುಟ್ಬಾಲ್ ಪಂದ್ಯವನ್ನು ಮಹಿಳೆಯರು ವೀಕ್ಷಿಸಲು ಫ್ಯಾಮಿಲಿ ಸೆಕ್ಷನ್ ರೂಪಿಸಲಾಗಿದ್ದು ಪುರುಷರೇ ಅಧಿಕ ಸಂಖ್ಯೆಯಲ್ಲಿರುವ ವೀಕ್ಷಕರಿಂದ ಈ ವಿಭಾಗವನ್ನು ಪ್ರತ್ಯೇಕಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಸೌದಿಯಲ್ಲಿನ ಅತ್ಯಂತ ಕಟ್ಟುನಿಟ್ಟಿನ ಲಿಂಗ ಪ್ರತ್ಯೇಕತೆಯನ್ನು ಕೊಂಚ ಮಟ್ಟಿಗೆ ಸಡಿಲು ಗೊಳಿಸಲಾಗಿತ್ತು. ಪಟ್ಟದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ “ಸೌದಿ ಸಮಾಜವನ್ನು ಆಧುನೀಕರಿಸುವ ಮತ್ತು ಆರ್ಥಿಕತೆಯನ್ನು ಪ್ರೋತ್ಸಾಹಿಸುವ’ ಮಹತ್ವಾಕಾಂಕ್ಷೆಯ ಯೋಜನೆಯೇ ಇದಕ್ಕೆ ಕಾರಣವಾಗಿತ್ತು.
ಅವರ ಆದೇಶದ ಪರಿಣಾಮವಾಗಿ ಈ ತನಕ ಪುರುಷ ವೀಕ್ಷಕರಿಗೆ ಮಾತ್ರವೇ ಪ್ರವೇಶವಿದ್ದ ಕಿಂಗ್ ಫಾಹದ್ ಸ್ಟೇಡಿಯಂ (ರಿಯಾಧ್), ಕಿಂಗ್ ಅಬ್ದುಲ್ಲ ನ್ಪೋರ್ಟ್ಸ್ ಸಿಟಿ (ಜೆದ್ದಾ) ಮತ್ತು ಪ್ರಿನ್ಸ್ ಮೊಹಮ್ಮದ್ ಬಿನ್ ಫಹಾದ್ ಸ್ಟೇಡಿಯಂ (ದಮ್ಮಾಮ್) ನಲ್ಲಿ ಇದೀಗ ಪ್ರತ್ಯೇಕ ಮಹಿಳಾ ಗ್ಯಾಲರಿಯನ್ನು ವ್ಯವಸ್ಥೆಗೊಳಿಸಲಾಗಿದೆ.
ಕಳೆದ ವರ್ಷದ ತನಕವೂ ಮಹಿಳೆಯರಿಗೆ ಮೋಟಾರು ವಾಹನ ಚಾಲನೆ ನಿಷಿದ್ಧವಿದ್ದ ವಿಶ್ವದ ಏಕೈಕ ದೇಶವಾಗಿದ್ದ ಸೌದಿ ಅರೇಬಿಯದಲ್ಲಿ ಈಗ ಮಹಿಳೆಯರಿಗೆ ಡ್ರೈವ್ ಮಾಡುವ ಅವಕಾಶವಿದೆ.