Advertisement
ಬಹುತೇಕ ಕಡೆ ಅನರ್ಹ ಶಾಸಕರೇ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆಯಿದ್ದು, 12- 13 ಸ್ಥಾನ ಗೆಲ್ಲುವುದಾಗಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವಿಗೆ ಪೂರಕ ಮಾಹಿತಿ ಇಲ್ಲದಿರುವುದು ಪಕ್ಷದ ನಾಯಕರ ಆತಂಕ ಹೆಚ್ಚಿಸಿದ್ದು, ಆ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿ ಗೆಲುವಿಗೆ ಶ್ರಮಿಸಲು ನಿರ್ಧರಿಸಿದ್ದಾರೆ. ಕನಿಷ್ಠ 8 ರಿಂದ 10 ಸ್ಥಾನಗಳನ್ನು ಗೆದ್ದರಷ್ಟೇ ಸರ್ಕಾರವನ್ನು ಸುಸ್ಥಿರಗೊಳಿಸಿ ಸುಗಮ ಆಡಳಿತ ನೀಡಲು ಸಾಧ್ಯವಾಗಲಿದ್ದು, ಆ ಗುರಿಯನ್ನು ಪಕ್ಷ ಹೇಗೆ ತಲುಪಲಿದೆ ಎಂಬ ಕುತೂಹಲ ಮೂಡಿದೆ.
Related Articles
Advertisement
ಕೆಲ ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಗಳು, ಪರಾಜಿತ ಅಭ್ಯರ್ಥಿಗಳು ಅಸಮಾಧಾನಗೊಂಡಿದ್ದು, ಬಂಡಾಯ ತಲೆದೋರದಂತೆ ಪರಿಸ್ಥಿತಿ ನಿಭಾಯಿಸಿ ಸಂಘಟಿತವಾಗಿ ಉಪಚುನಾವಣೆ ಎದುರಿಸುವ ಜವಾಬ್ದಾರಿಯನ್ನು ಉಭಯ ನಾಯಕರು ಹೊರಬೇಕಿದೆ. ಎರಡು ವರ್ಷದ ಹಿಂದೆ ಯಾರ ವಿರುದ್ಧ ಪ್ರಚಾರ ನಡೆಸಿ, ಹೋರಾಟ ನಡೆಸಿದ್ದರೋ ಅವರ ಪರವಾಗಿಯೇ ಬಿಜೆಪಿ ಕಾರ್ಯಕರ್ತರು ಮತ ಯಾಚಿಸಬೇಕಿದ್ದು, ಎಷ್ಟರ ಮಟ್ಟಿಯಲ್ಲಿ ಈ ಕಾರ್ಯದಲ್ಲಿ ಸಕ್ರಿಯರಾಗಲಿದ್ದಾರೆ ಎಂಬುದೂ ನಿರ್ಣಾಯಕವೆನಿಸಿದೆ.
ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ವರದಾನ: ಸದ್ಯ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಅನರ್ಹತೆಗೊಂಡ ಶಾಸಕರಿಗೆ ವೈಯಕ್ತಿಕ ವರ್ಚಸ್ಸಿದ್ದು, ವರದಾನವಾಗುವ ನಿರೀಕ್ಷೆಯಿದೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ವೈಯಕ್ತಿಕ ವರ್ಚಸ್ಸು, ಜಾತಿ ಇತರೆ ಅಂಶಗಳ ಕಾರಣಕ್ಕೆ ಗೆದ್ದು ಬರುವ ಸಾಮರ್ಥಯವಿದೆ. ಹೀಗಿರುವಾಗ ಪಕ್ಷದ ಬೆಂಬಲ, ಸಂಘಟನೆಯ ಬಲ ಸೇರಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕೆಲವೆಡೆ ಹಿನ್ನಡೆಯಾಗುವ ನಿರೀಕ್ಷೆಯಿದ್ದು, ಸವಾಲುಗಳೂ ಇವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.
5 ಕ್ಷೇತ್ರಗಳಲ್ಲಿ ಪೂರಕ ವಾತಾವರಣವಿಲ್ಲ: ಉಪಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಗೆಲುವಿಗೆ ಪೂರಕ ವಾತಾವರಣವಿರುವಂತೆ ಸದ್ಯ ಕಾಣುತ್ತಿದೆ. ಹುಣಸೂರು, ಕೆ.ಆರ್.ಪೇಟೆ, ಹೊಸಕೋಟೆ, ರಾಣೆಬೆನ್ನೂರು ಹಾಗೂ ವಿಜಯನಗರ ಕ್ಷೇತ್ರಗಳಲ್ಲಿ ಸದ್ಯದ ಮಟ್ಟಿಗೆ ಪೂರಕ ವಾತಾವರಣವಿದ್ದಂತಿಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಕೆಲವೆಡೆ ಕ್ಷೇತ್ರದೊಂದಿಗೆ ಹೆಚ್ಚು ಒಡನಾಟವಿಟ್ಟುಕೊಳ್ಳದಿರುವುದು, ವೈಯಕ್ತಿಕ ನಡವಳಿಕೆಗಳ ಬಗ್ಗೆಯೂ ಅಪಸ್ವರವಿರುವುದು ಸದ್ಯಕ್ಕೆ ಕಾಣುತ್ತಿದೆ. ಹಾಗಾಗಿ ಈ ಕ್ಷೇತ್ರಗಳತ್ತ ವಿಶೇಷ ಗಮನ ನೀಡಿ ಸಂಘಟನೆ ಬಲಪಡಿಸಿ ಗೆಲುವು ಸಾಧಿಸಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಹೇಳಿದರು.
ಹಳೆ ಮೈಸೂರಿನಲ್ಲಿ ಲಾಭದ ಲೆಕ್ಕಾಚಾರ: ಬಿಜೆಪಿಗೆ ಈವರೆಗೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗದ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಸಂಘಟನೆ ಬಲಪಡಿಸುವ ಲೆಕ್ಕಾಚಾರ ಪಕ್ಷದ ನಾಯಕರಲ್ಲಿದೆ. ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆದ್ದರೆ ಪಕ್ಷದ ವರ್ಚಸ್ಸು ಇನ್ನಷ್ಟು ವಿಸ್ತರಿಸಿ ಮುಂದೆ ಅನುಕೂಲವಾಗುವ ನಿರೀಕ್ಷೆ ಇದೆ. ಹಾಗಾಗಿ ಈ ಭಾಗದ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡಿ ಭರ್ಜರಿ ಪ್ರಚಾರ ನಡೆಸಲು ನಾಯಕರು ಮುಂದಾಗಿದ್ದಾರೆ.
* ಎಂ. ಕೀರ್ತಿಪ್ರಸಾದ್