ನವದೆಹಲಿ: ಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬುವಂತೆ, ಐಎಎಫ್ ಎಸ್-400 ಕ್ಷಿಪಣಿ ವ್ಯವಸ್ಥೆಯ ಮೊದಲ ಸ್ಕ್ವಾಡ್ರನ್ ಅನ್ನು ಪಂಜಾಬ್ ವಲಯದಲ್ಲಿ ನಿಯೋಜಿಸಲು ನಿರ್ಧರಿಸಿದೆ.
ನೆರೆಯ ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗಬಹುದಾದ ವೈಮಾನಿಕ ಅಪಾಯವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ತಿಂಗಳ ಆರಂಭದಿಂದಲೇ ರಷ್ಯಾದಿಂದ ಕ್ಷಿಪಣಿ ವ್ಯವಸ್ಥೆಯ ಭಾಗಗಳು ಭಾರತವನ್ನು ತಲುಪಲು ಆರಂಭವಾಗಿವೆ. ಕೆಲವೇ ವಾರಗಳಲ್ಲಿ ಇದು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿವೆ.
ಸುಮಾರು 400 ಕಿ.ಮೀ. ದೂರದಿಂದ ಬರುವ ವೈಮಾನಿಕ ಅಪಾಯವನ್ನು ಎದುರಿಸುವಂಥ ಶಕ್ತಿ ಎಸ್-400ಗೆ ಇದೆ. ಪ್ರಸಕ್ತ ವರ್ಷದ ಅಂತ್ಯದಲ್ಲಿ ಮೊದಲ ಸ್ಕ್ವಾಡ್ರನ್ ಪೂರೈಕೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಿಐನೊಂದಿಗೆ ಹಂಗಾಮಾ ಸಹಯೋಗ : 6 ತಿಂಗಳ ಹಂಗಾಮಾ ಪ್ರೀಮಿಯಂ ಉಚಿತ
ಮೊದಲ ಸ್ಕ್ವಾಡ್ರನ್ ನಿಯೋಜನೆಯಾದ ಬಳಿಕ ವಾಯುಪಡೆಯು ಪೂರ್ವ ಗಡಿಯತ್ತ ಗಮನ ಹರಿಸಲಿದ್ದು, ದೇಶದೊಳಗೇ ಸಿಬ್ಬಂದಿಗೆ ತರಬೇತಿ ನೀಡಲು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಿದೆ ಎಂದೂ ಮೂಲಗಳು ಹೇಳಿವೆ.