Advertisement

ಮೊದಲು ಅವಮಾನ ಬಳಿಕ ಸಮ್ಮಾನ

11:33 AM Mar 01, 2018 | |

ಪಣಂಬೂರು: ಬಿಗ್‌ ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ಬುಧವಾರ ಪಣಂಬೂರ್‌ ಬೀಚ್‌ಗೆ ಆಗಮಿಸಿ ಕೆಲಕಾಲ ಮೋಜಿನಾಟದಲ್ಲಿ ನಿರತರಾದರು. ಇದೇ ಸಂದರ್ಭ ಉದಯವಾಣಿ ಸುದಿನದೊಂದಿಗೆ ತಮ್ಮ ಬಿಗ್‌ಬಾಸ್‌ ಅನುಭವವನ್ನು ಅವರು ಹಂಚಿಕೊಂಡರು.

Advertisement

ಬಿಗ್‌ಬಾಸ್‌ ಬೇಡ ಅಂತಿದ್ದವರು ಬಿಗ್‌ಬಾಸ್‌ ಆಗಿಯೇ ಬಿಟ್ಟಿದ್ದೀರಿ ?
ಹೌದು, ಬಿಗ್‌ ಬಾಸ್‌ ಕಾಂಟ್ರವರ್ಸಿ ಇರುವ ಒಂದು ಕಾರ್ಯಕ್ರಮ ಅಂದ್ಕೊಂಡಿದ್ದೆ. ಆದರೆ ಬಳಿಕ ತೀರ್ಮಾನ ಮಾಡಿ ಹೋದೆ. ಇದರಲ್ಲಿ 107 ದಿನ ಕಳೆಯೋದು ಹೇಗೆ? ಎಂಬುದರ ಬಗ್ಗೆ ಯೋಜನೆ ಇರಲಿಲ್ಲ. ಎರಡು ದಿನ ಮುಂಚೆ ಹೋಗೋಣ ಅಂತ ತೀರ್ಮಾನಿಸಿದೆ. ಮೊಬೈಲ್‌, ಸಮಯದ ಪರಿವೆಯಿಲ್ಲದೆ ಇರುವ ಹೊರಗಿನ ಜನರ ಸಂಪರ್ಕವಿಲ್ಲದೆ ಕಳೆಯೋದು ದೊಡ್ಡ ಸಾಹಸ. ಬೇಜಾರು, ಸಂತಸ ಎಲ್ಲವೂ ಬಿಗ್‌ಬಾಸ್‌ನಲ್ಲಾಗಿದೆ. ಆ ಕಾರ್ಯಕ್ರಮಕ್ಕೆ ಹೋದ ಅನಂತರ ಒಂದು ಉತ್ತಮ ಸಾಧನೆ ಮಾಡಿದೆ ಅಂತ ಹೆಮ್ಮೆಯಿದೆ.

ವೈಯಕ್ತಿಕವಾಗಿ ಆಲ್ಬಮ್‌ ಮಾಡಬೇಕು ಅನ್ನುವ ಆಸೆ ಈಡೇರಿತೆ?
ನಾನು ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ಬಂದಿದೆ. ಕರ್ನಾಟಕದಲ್ಲಿಯೂ ಸಿನೆಮಾ ಅಲ್ಲದೆ ಸ್ವತಂತ್ರ ಆಲ್ಬಮ್‌ ಮಾಡಬೇಕು ಎನ್ನುವ ಕನಸು ಎಂಟು ವರ್ಷದ ಹಿಂದೆಯೇ ಇತ್ತು. ಯಾರೂ ಬೆಂಬಲಿಸದ ಸಂದರ್ಭ ಹತ್ತಿರದ ಸ್ನೇಹಿತರಿಂದ ಚಂದಾ ಎತ್ತಿ ಮಾಡಿದೆ. ಪ್ರಾಯೋಜಕರೂ ದೊರಕದ ಸಂದರ್ಭದಲ್ಲೂ ಎದೆಗುಂದದೆ ಸವಾಲಾಗಿ ಸ್ವೀಕರಿಸಿ ಮಾಡಿದೆ. ಈಗ ಉತ್ತಮ ಪ್ರತಿಕ್ರಿಯೆ ಸಂಗೀತ ಲೋಕದಿಂದ ಬರುತ್ತಿದೆ.

ಸಿನೆಮಾಗೆ ಅವಕಾಶ ಬರುತ್ತಿವೆಯೆ?
ಹೌದು, ಈಗ ಒಂದೆರಡು ಆಹ್ವಾನ ಬಂದಿದೆ. ಆದರೆ ಮೊದಲು ಸಂಗೀತಕ್ಕೆ ನನ್ನ ಆದ್ಯತೆ. ಬಳಿಕ ಸಿನೆಮಾ, ನಟನೆ, ಸಂಗೀತ ನಿರ್ದೇಶಕ. ಸಂಗೀತಗಾರನಾಗಿ ಮೊದಲು ಕೆಲಸ ಮಾಡಲು ಇಷ್ಟ ಪಡುತ್ತೇನೆ. ಸಿನೆಮಾ ಎಂದಾಗ ಅಪಾರ ಪರಿಶ್ರಮ, ಸಮಯ ಬೇಕಾಗುತ್ತದೆ. ಚಿಟಿಕೆ ಹೊಡೆಯುದ್ರಲ್ಲಿ ಆಗುವ ಕೆಲಸಗಳಲ್ಲ. ಯೋಚನೆ ಮಾಡಿ ಇಳಿಯ ಬೇಕಾಗುತ್ತದೆ.

ಮಂಗಳೂರು, ಕರಾವಳಿಯಲ್ಲಿ ಸಂಗೀತ ಟ್ರೆಂಡ್‌ ಹೇಗಿದೆ?
ನಾನು ಕಲಿತದ್ದು ಪುತ್ತೂರು ಫಿಲೋಮಿನ ಕಾಲೇಜಿನಲ್ಲಿ. ಮಂಗಳೂರು ಸಂಗೀತ, ನಾಟಕ ಕಲೆಗಳ ತವರೂರು. ಮಂಗಳೂರು ಜನತೆ ಸ್ವೀಕರಿಸಿದರೆ ಜಗತ್ತಿನಲ್ಲಿ ಪ್ರಸಿದ್ಧಿ ಆಗುವುದರಲ್ಲಿ ಸಂಶಯವಿಲ್ಲ. ಗುರುಕಿರಣ್‌ ಅವರಂತಹ ಖ್ಯಾತ ಸಂಗೀತಗಾರರು ಮಂಗಳೂರಿನವರು. 

Advertisement

ತಾಳ್ಮೆಯಿಂದ ಕೆಲಸ ಮಾಡಿ
ಎದೆಗುಂದಬೇಡಿ. ಮೊದಲು ಅವಮಾನ ಬಳಿಕ ಸಮ್ಮಾನ. ಬಳಿಕ ಅವಮಾನಿತರಿಂದಲೇ ನಿಮಗೆ ಸಮ್ಮಾನ ದೊರೆಯುವ
ಅವಕಾಶ ಬರುತ್ತದೆ. ತಾಳ್ಮೆಯಿಂದ ಕೆಲಸ ಮಾಡಿ. ಇದು ನನ್ನ ವಿಚಾರದಲ್ಲಿ ನಿಜ ಆಗಿದೆ. ಯಾರೂ ಏನು ಹೇಳಿದರೂ ಪ್ರಯತ್ನ ಬಿಡ ಬೇಡಿ. ಉತ್ತಮ ಸಂಗೀತ ರಚನೆಗೆ ಆದ್ಯತೆ ನೀಡಿ.
– ಚಂದನ್‌ ಶೆಟ್ಟಿ

 ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next