Advertisement

ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ: ಧೋನಿ-ಪಂತ್‌ ಪಡೆಗಳ “ಫೈನಲ್‌ ರೇಸ್‌’

12:09 AM Oct 10, 2021 | Team Udayavani |

ದುಬಾೖ: ಐಪಿಎಲ್‌ ಪಂದ್ಯಾವಳಿ ತನ್ನ ಲೀಗ್‌ ವ್ಯವಹಾರವನ್ನು ಮುಗಿಸಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದದ್ದು, ಕಳೆದ ಸಲ ಪಾತಾಳದಲ್ಲಿದ್ದ ಚೆನ್ನೈ ಈ ಬಾರಿ ಫೀನಿಕ್ಸ್‌ನಂತೆ ಎದ್ದು ನಿಂತು ದ್ವಿತೀಯ ಸ್ಥಾನ ಅಲಂಕರಿಸಿದ್ದೆಲ್ಲ ಲೀಗ್‌ ಹಂತದ ಅಚ್ಚರಿ.

Advertisement

ರವಿವಾರ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. ಭಾರತದ ಮಾಜಿ ಹಾಗೂ ಹಾಲಿ ವಿಕೆಟ್‌ ಕೀಪರ್‌ಗಳ ನೇತೃತ್ವದ ತಂಡಗಳೆರಡು ಇಲ್ಲಿ ಸೆಣಸುತ್ತಿರುವುದು ವಿಶೇಷ. ಧೋನಿ ನಾಯಕತ್ವದ ಚೆನ್ನೈ ಮತ್ತು ರಿಷಭ್‌ ಪಂತ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌ ದುಬಾೖ ಅಂಗಳದಲ್ಲಿ ಜಿದ್ದಾಜಿದ್ದಿ ಹೋರಾಟವೊಂದಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಇದೆ.

ಇತ್ತಂಡಗಳಲ್ಲಿ ಡೆಲ್ಲಿಗೆ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಅದು ಚೆನ್ನೈಗೆ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಈ ಲೆಕ್ಕಾಚಾರ ದಲ್ಲಿ ಡೆಲ್ಲಿ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಆದರೆ ಚೆನ್ನೈ ಪಾಲಿಗೆ ಪ್ಲೇ ಆಫ್‌ ಎಂಬುದು ಎರಡನೇ ಮನೆ ಇದ್ದಂತೆ. ಈವರೆಗಿನ 12 ಕೂಟಗಳಲ್ಲಿ ಅದು 11 ಸಲ ದ್ವಿತೀಯ ಸುತ್ತಿಗೆ ಲಗ್ಗೆ ಇರಿಸಿದ್ದನ್ನು ಮರೆಯುವಂತಿಲ್ಲ.

ಚೆನ್ನೈಗೆ ಆರಂಭಿಕರ ಬಲ
ಚೆನ್ನೈ ಸೇಡು ತೀರಿಸಿಕೊಳ್ಳಬೇಕಾದರೆ ಆರಂಭಿಕರಾದ ಋತುರಾಜ್‌ ಗಾಯಕ್ವಾಡ್‌-ಫಾ ಡು ಪ್ಲೆಸಿಸ್‌ ಜೋಡಿ ಮತ್ತೊಂದು ಅಮೋಘ ಆರಂಭ ಒದಗಿಸಬೇಕಾದುದು ಅನಿವಾರ್ಯ. ಇವರಿಬ್ಬರು ನಿರ್ಮಿಸುತ್ತ ಬಂದ ಭದ್ರ ಅಡಿಪಾಯವೇ ಚೆನ್ನೈ ಯಶಸ್ಸಿನ ಮೂಲ. ಇಬ್ಬರೂ ಪ್ರಸಕ್ತ ಸಾಲಿನಲ್ಲಿ 500 ರನ್‌ ಗಡಿ ದಾಟಿ ಮುನ್ನುಗ್ಗಿದ್ದಾರೆ.

Advertisement

ಆದರೆ ಚೆನ್ನೈ ತಂಡದ ಮಿಡ್ಲ್ ಆರ್ಡರ್‌ ದುರ್ಬಲ. ಕಾರಣ, ಸುರೇಶ್‌ ರೈನಾ ಅವರ ಔಟ್‌ಆಫ್‌ ಫಾರ್ಮ್. ಐಪಿಎಲ್‌ ಇತಿಹಾಸದ ಟಾಪ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರೈನಾ 12 ಪಂದ್ಯಳಿಂದ ಕೇವಲ 160 ರನ್‌ ಗಳಿಸಿದ್ದಾರೆ. ಮೊಯಿನ್‌ ಅಲಿ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಹೀಗಾಗಿ ಇಲ್ಲಿ ಅಂಬಾಟಿ ರಾಯುಡು ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ಇದನ್ನೂ ಓದಿ:ಟಾಮ್‌ ಮೂಡಿ ಟೀಮ್‌ ಇಂಡಿಯಾ ಕೋಚ್‌?

ನಾಯಕ ಧೋನಿ ಬ್ಯಾಟಿಂಗ್‌ನಲ್ಲೂ ಮೊದಲಿನ ಚಾರ್ಮ್ ಇಲ್ಲ ಎಂಬುದು ರಹಸ್ಯವೇನಲ್ಲ. 14 ಪಂದ್ಯಗಳಿಂದ ಅವರು ಗಳಿಸಿದ್ದು ಬರೀ 96 ರನ್‌! ಅವರು ತನಗಿಂತ ಮೊದಲು ಜಡೇಜ ಅವರನ್ನು ಬ್ಯಾಟಿಂಗಿಗೆ ಕಳುಹಿಸಿದರೆ ತಂಡಕ್ಕೆ ಹೆಚ್ಚಿನ ಲಾಭವಾದೀತು ಎಂಬುದೊಂದು ಲೆಕ್ಕಾಚಾರ.
ಕೆರಿಬಿಯನ್‌ ಸವ್ಯಸಾಚಿ ಡ್ವೇನ್‌ ಬ್ರಾವೊ ಬೌಲಿಂಗ್‌ನಲ್ಲಿ ಓಕೆ, ಆದರೆ ಬ್ಯಾಟಿಂಗ್‌ ಲಯ ತಪ್ಪಿದೆ.

ಬೌಲಿಂಗ್‌ ವಿಭಾಗದಲ್ಲಿ ಶಾರ್ದೂಲ್ , ಹ್ಯಾಝಲ್‌ವುಡ್‌, ಜಡೇಜ ಕ್ಲಿಕ್‌ ಆದರೆ ಹೋರಾಟ ತೀವ್ರಗೊಳ್ಳಲಿದೆ.

ಡೆಲ್ಲಿ ಸಮರ್ಥ ಪಡೆ
ಡೆಲ್ಲಿಯ ಓಪನಿಂಗ್‌ ಕೂಡ ಗಟ್ಟಿಮುಟ್ಟಾಗಿದೆ. ಶಿಖರ್‌ ಧವನ್‌ (544 ರನ್‌)-ಪೃಥ್ವಿ ಶಾ (401 ರನ್‌) ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಚೆನ್ನೈಗೆ ಹೋಲಿಸಿದರೆ ಡೆಲ್ಲಿಯ ಮಧ್ಯಮ ಕ್ರಮಾಂಕ ಹೆಚ್ಚು ಬಲಿಷ್ಠ. ಶ್ರೇಯಸ್‌ ಅಯ್ಯರ್‌, ನಾಯಕ ರಿಷಭ್‌ ಪಂತ್‌ ಇಲ್ಲಿನ ಆಧಾರಸ್ತಂಭವಾಗಿದ್ದಾರೆ. ಬಿಗ್‌ ಹಿಟ್ಟರ್‌ ಹೆಟ್‌ಮೈರ್‌ ಬೇಕಾಬಿಟ್ಟಿ ಆಟಕ್ಕೆ ಮುಂದಾಗದೆ ಶಿಸ್ತಿನಿಂದ ಬ್ಯಾಟ್‌ ಬೀಸುತ್ತಿರುವುದು ಡೆಲ್ಲಿಗೆ ಲಾಭವೇ ಆಗಿದೆ. ಅಜಿಂಕ್ಯ ರಹಾನೆ ಇನ್ನೂ ಕಣಕ್ಕಿಳಿದಿಲ್ಲ. ಹಾಗೆಯೇ ಸ್ಟೀವನ್‌ ಸ್ಮಿತ್‌ ಕೂಡ ರೇಸ್‌ನಲ್ಲಿದ್ದಾರೆ. ಮಾರ್ಕಸ್‌ ಸ್ಟೋಯಿನಿಸ್‌ ಗಾಯಾಳಾಗಿ ಹೊರಗುಳಿದಿದ್ದು ಡೆಲ್ಲಿಗೆ ಬಿದ್ದ ಹೊಡೆತವಾದರೂ ಇದನ್ನು ನಿಭಾಯಿಸಿ ನಿಲ್ಲುವಲ್ಲಿ ತಂಡ ಯಶಸ್ವಿಯಾಗಿದೆ.

ಡೆಲ್ಲಿಯ ಬೌಲಿಂಗ್‌ ಸರದಿ ಹೆಚ್ಚು ಘಾತಕ. ಆವೇಶ್‌ ಖಾನ್‌ (22 ವಿಕೆಟ್‌), ಅಕ್ಷರ್‌ ಪಟೇಲ್‌ (15 ವಿಕೆಟ್‌), ಕಾಗಿಸೊ ರಬಾಡ (13 ವಿಕೆಟ್‌) ಮತ್ತು ಅನ್ರಿಚ್‌ ನೋರ್ಜೆ ಅವರ ದಾಳಿಯನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ಇವರು ಅರ್ಲಿ ಬ್ರೇಕ್‌ ಒಸಗಿಸಿದ್ದೇ ಆದರೆ ಡೆಲ್ಲಿ ಅರ್ಧ ಪಂದ್ಯ ಗೆದ್ದಂತೆ!

Advertisement

Udayavani is now on Telegram. Click here to join our channel and stay updated with the latest news.

Next