ಸಿಂಧನೂರು: ನಗರದ ಮುಖ್ಯ ಹಾಗೂ ಒಳ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡುತ್ತಿದ್ದು, 5.5 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಕುಷ್ಟಗಿ ಮುಖ್ಯರಸ್ತೆಯಿಂದ ಹಟ್ಟಿ ಮಾರ್ಗದ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 1.53 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುತ್ತಿದ್ದು, ಆರು ತಿಂಗಳ ಕಾಲಮಿತಿಯಿದೆ. ವಾರ್ಡ್ ನಂ.17ರಲ್ಲಿ 84 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಐದು ಕೋಟಿ ರೂ.ವೆಚ್ಚದ ಪ್ಯಾಕೇಜ್‌ನಲ್ಲಿ ನಗರದ ವಾರ್ಡ್ ನಂ.2,4,5,8, 10 ಮತ್ತು 14 ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಾರಂಭಿಕವಾಗಿ 16 ಮತ್ತು 17ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಕೇಳಲಾಗಿತ್ತು. ಈಗಿನ ಸರಕಾರ 1 ಕೋಟಿ ರೂ.ಕೊಟ್ಟಿದೆ. 40ನೇ ಉಪಕಾಲುವೆ ಮಾರ್ಗದ ರಸ್ತೆಯನ್ನು 3 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. 2 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ, 1 ಕೋಟಿ ರೂ.ನಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದರು.
ವಾರ್ಡ್ ನಂ.17ರ ವೆಂಕಟೇಶ್ವರ ನಗರದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಉದ್ಯಾನ ಹಾಗೂ 15ನೇ ಹಣಕಾಸು ಯೋಜನೆಯಡಿ ಅಳವಡಿಸಲಾದ ಹೈಮಾಸ್ಟ್ ದೀಪಗಳನ್ನು ಶಾಸಕರು ಇದೇ ವೇಳೆ ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಾ| ಬಿ.ಎನ್. ಪಾಟೀಲ್, ನಗರಸಭೆ ಸದಸ್ಯರಾದ ಚಂದ್ರುಮೈಲಾರ್, ಸತ್ಯನಾರಾಯಣ ದಾಸರಿ, ಕೆ.ರಾಜಶೇಖರ, ಕೆ.ಜಿಲಾನಿಪಾಷಾ, ಕೆ.ಹನುಮೇಶ, ಆಲಂಬಾಷಾ, ಶಬ್ಬೀರ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಜೆಡಿಎಸ್ ಪ್ರಧಾನ ಸಂಚಾಲಕ ಬಿ.ಹರ್ಷ, ಮುಖಂಡರಾದ ಸುರೇಶ ಜಾಧವ್, ಅಶೋಕ ಉಮಲೂಟಿ, ಅಭಿಷೇಕ್ ನಾಡಗೌಡ, ವೆಂಕಟೇಶ್ ನಂಜಲದಿನ್ನಿ ಮುಂತಾದವರು ಭಾಗವಹಿಸಿದ್ದರು.