ಹೊಸದಿಲ್ಲಿ: ದೇಶದ ಮೊತ್ತಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸತತ 3ನೇ ಬಾರಿಗೆ ಪ್ರಧಾನಿಯಾಗಿದ್ದವರು. ಸದ್ಯ ಹಂಗಾಮಿ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ, ರವಿವಾರ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂಥ ಸಾಧನೆ ಮಾಡಲಿರುವ ದೇಶದ ಮೊದಲ ಮತ್ತು ಕಾಂಗ್ರೆಸ್ ಹೊರತಾಗಿರುವ ಪಕ್ಷದ ಮೊದಲ ನಾಯಕ ನರೇಂದ್ರ ಮೋದಿ.
ಹೀಗೆ ಹ್ಯಾಟ್ರಿಕ್ ಸಾಧನೆ ಮಾಡುವ ಅವರ ಸಾಧನೆಯ ಹಿಂದೆ ಹಲವು ವಿಶೇಷತೆಯೂ ಇವೆ. 1950ರಲ್ಲಿ ಜನಿಸಿದ ನರೇಂದ್ರ ಮೋದಿ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮೋದಿ ಗುಜರಾತ್‌ನಲ್ಲಿ 12 ವರ್ಷ 227 ದಿನಗಳ ಕಾಲ ಅಧಿಕಾರ ನಡೆಸಿದ್ದರು.
ಬಾಲ್ಯದಿಂದಲೇ ದೇಶಸೇವೆಯ ಕಡೆಗೆ ಒಲವು ತೋರಿದ್ದ ಮೋದಿ, ವೈಯಕ್ತಿಕ ಜೀವನದ ಕಡೆ ನಿರ್ಲಕ್ಷ್ಯ ತೋರಿದ್ದರು. ಬಳಿಕ ರಾಷ್ಟ್ರೀಯ ಸ್ವಯಂ ಸೇವೇಕ ಸಂಘ(ಆರ್‌ಎಸ್‌ಎಸ್) ಸೇರಿ 80ರ ದಶಕದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿ ದ್ದರು. ದೇಶದ ತುರ್ತು ಪರಿಸ್ಥಿತಿ, ರಾಮಮಂದಿರದ ಹೋರಾಟ ಸೇರಿ ಸಂಘದ ಜತೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಿಜೆಪಿಯನ್ನು ಸೇರಿದ ಮೋದಿ 2001ರಲ್ಲಿ ಗುಜರಾತ್ ಮುಖ್ಯ ಮಂತ್ರಿಯಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಅವರು ಗುಜರಾತ್ ವಿಧಾನಸಭೆಯಲ್ಲಿ ಶಾಸಕರಾಗಿರಲಿಲ್ಲ ಎಂಬುದು ಮತ್ತೂಂದು ವಿಶೇಷ. ಸತತ 12 ವರ್ಷ 277 ದಿನ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ 2014ರಲ್ಲಿ ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಆಯ್ಕೆಯಾದರು. 5 ವರ್ಷಗಳ ಅಧಿಕಾರದ ಬಳಿಕ ಸಾಕಷ್ಟು ಯಶಸ್ಸು ಕಂಡಿದ್ದ ಪ್ರಧಾನಿ ಹೊಸ ಅಲೆಯನ್ನೇ ಎಬ್ಬಿಸಿದ್ದರು. 2019ರಲ್ಲಿ ಬಿಜೆಪಿಯೊಂದೇ 303 ಸ್ಥಾನಗಳನ್ನು ಗಳಿಸುವುದರೊಂದಿಗೆ ಇಂದಿರಾ ಗಾಂಧಿ ಬಳಿಕ ದೊಡ್ಡ ಬಹುಮತದೊಂದಿಗೆ ಗೆಲುವು ಪಡೆದ ಕೀರ್ತಿಯೂ ಮೋದಿಯವರಿಗಿದೆ.
ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೇ ಅಚ್ಚರಿ
ಆರ್‌ಎಸ್‌ಎಸ್‌ನ ಮೂಲದಿಂದ ಬಿಜೆಪಿ ಸೇರಿದ್ದ ನರೇಂದ್ರ ಮೋದಿ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ಕೆಲಸಗಳನ್ನು ನಿರ್ವಹಿದ್ದರೇ ಹೊರತು ರಾಜಕಾರಣಿಯಾಗಿ ಶಾಸಕೀಯ ಅಥವಾ ಸಂಸದೀಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರಲಿಲ್ಲ. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೋದಿಯವರಿಗೆ ಕರೆ ಮಾಡಿ “ದಿಲ್ಲಿಯ ಸಹವಾಸ ನಿನಗೆ ಸಾಕು, ನೀನಿನ್ನು ಗುಜರಾತ್‌ಗೆ ತೆರಳು’ ಎಂದಿದ್ದರು. ಈ ರೀತಿಯಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಬೇಕೆಂದು ವಾಜಪೇಯಿ ನಿರ್ಧರಿಸಿದ್ದರು. ಹಿರಿಯ ನಾಯಕನ ಆಣತಿಯಂತೆ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾದ ಮೋದಿ ಅಲ್ಲಿಯೂ ಯಶಸ್ವಿಯಾಗಿ ಆಡಳಿತ ನಡೆಸಿ ಸತತ 13 ವರ್ಷಗಳು ಸೇವೆ ಸಲ್ಲಿಸಿದರು.