Advertisement

ಅಮೆರಿಕದ ಅಧ್ಯಕ್ಷೀಯ ಚರ್ಚೆ: 10 ಸುಳ್ಳು ಹೇಳಿದ ಟ್ರಂಪ್‌, 2 ಸುಳ್ಳು ನುಡಿದ ಬೈಡೆನ್‌!

04:34 PM Sep 30, 2020 | Karthik A |

ಮಣಿಪಾಲ: ನವೆಂಬರ್‌ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಓಹಿಯೋದ ಕ್ಲೀವ್‌ಲ್ಯಾಂಡ್‌ನ‌ಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (ರಿಪಬ್ಲಿಕನ್‌) ಮತ್ತು ಡೆಮೋಕ್ರಾಟ್‌ ಅಭ್ಯರ್ಥಿ ಜೋ ಬಿಡೆನ್‌ ನಡುವೆ ಮೊದಲ 90 ನಿಮಿಷಗಳ ಚರ್ಚೆ ನಡೆಯಿತು.

Advertisement

ಈ ಚರ್ಚೆಯಲ್ಲಿ ಉಭಯ ನಾಯಕರು ನೇರಾ ನೇರಾ ಆರೋಪಗಳಿಗೆ ಇಳಿದಿದ್ದ ವಿಶೇಷವಾಗಿತ್ತು. ಕೋವಿಡ್‌ ನಿರ್ವಹಣೆ ಕುರಿತಂತೆ ಬಿಡೆನ್‌ ಅವರ ಆರೋಪಕ್ಕೆ ಉತ್ತರಿಸಿದ ಟ್ರಂಪ್‌ ಅವರು (ಬಿಡೆನ್‌) ಇಂದು ಒಂದು ವೇಳೆ ಅಧ್ಯಕ್ಷರಾಗಿದ್ದರೆ, ದೇಶವು 200 ಮಿಲಿಯನ್‌ ಜನರ ಸಾವಿಗೆ ಕಾರಣವಾಗುತ್ತಿತ್ತು ಎಂದು ಹೇಳಿದ್ದಾರೆ.

ಮತ್ತೊಂದು ಆಸಕ್ತಿದಾಯಕ ವಿಷಯ ಎಂದರೆ ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ, ಚರ್ಚೆಯಲ್ಲಿ ಟ್ರಂಪ್‌ 10 ಮತ್ತು ಬಿಡೆನ್‌ 2 ಸುಳ್ಳು ಹೇಳಿದ್ದಾರೆ ಎಂದು ವರದಿ ಮಾಡಿದೆ.

ಚರ್ಚೆಯ ಸಮನ್ವಯಕಾರನಾಗಿ ಫಾಕ್ಸ್‌ ನ್ಯೂಸ್‌ ಆಂಕರ್‌ ಕ್ರಿಸ್‌ ವ್ಯಾಲೇಸ್‌ ಇದ್ದರು. 2016ರಲ್ಲಿ, ವ್ಯಾಲೇಸ್‌ ಅವರು ಟ್ರಂಪ್‌ ಮತ್ತು ಹಿಲರಿ ಕ್ಲಿಂಟನ್‌ ಅವರ ಬಗ್ಗೆ ಚರ್ಚೆಯನ್ನು ನಡೆಸಿಕೊಟ್ಟಿದ್ದರು. ಎರಡೂ ಅಭ್ಯರ್ಥಿಗಳುಕ್ಲೀವ್‌ಲ್ಯಾಂಡ್‌ನ‌ ಸ್ಯಾಮ್ಸನ್‌ ಪೆವಿಲಿಯನ್ ಗೆ ಆಗಮಿಸಬೇಕಿತ್ತು. ಸ್ಥಳೀಯ ಸಮಯ ರಾತ್ರಿ 8: 31ಕ್ಕೆ ಟ್ರಂಪ್‌ ಆಗಮಿಸಿದರೆ, ಬಿಡೆನ್‌ ರಾತ್ರಿ 8:33ಕ್ಕೆ (ಎರಡು ನಿಮಿಷ ತಡವಾಗಿ) ಬಂದರು. ಟ್ರಂಪ್‌ ಅವರ ಪತ್ನಿ ಮೆಲಾನಿಯಾ ಮತ್ತು ಮಗಳು ಇವಾಂಕಾ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಭಾರತವನ್ನು ಉಲ್ಲೇಖಿಸಿದ ಟ್ರಂಪ್‌
ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಸಂಭವಿಸಿದ ಸಾವುಗಳ ಬಗ್ಗೆಯೂ ಟ್ರಂಪ್‌ ಪ್ರಸ್ತಾವಿಸಿದ್ದಾರೆ. ಬಿಡೆನ್‌ ಅವರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌ ಅವರು “ನೀವು ಕೋವಿಡ್‌ನಿಂದ ಸಾಯುವವರ ಸಂಖ್ಯೆಗಳ ಬಗ್ಗೆ ಮಾತನಾಡುವಾಗ ಚೀನದಲ್ಲಿ ಎಷ್ಟು ಜನರು ಸತ್ತರು ಎಂಬುದನ್ನು ನೀವು ಮರೆತಿದ್ದೀರಿ. ಜತೆಗೆ ರಷ್ಯಾದಲ್ಲಿ ಎಷ್ಟು ಜನರು ಸತ್ತರು ಮತ್ತು ಭಾರತದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬ ಮಾಹಿತಿಯನ್ನೂ ನೀವು ತಿಳಿಯಬೇಕು ಎಂದು ಹೆಳಿದರು. ಈ ದೇಶಗಳು ತಮ್ಮ ಸರಿಯಾದ ಅಂಕಿಅಂಶಗಳನ್ನು ನೀಡುವುದಿಲ್ಲ ಎಂಬುದು ಟ್ರಂಪ್‌ ಅವರ ವಾದವಾಗಿತ್ತು.

ಎರಡನೇ ಚರ್ಚೆ ಅಕ್ಟೋಬರ್‌ 15ರಂದು ಮತ್ತು ಮೂರನೆಯದು ಅಕ್ಟೋಬರ್‌ 22ರಂದು ನಡೆಯಲಿದೆ. ಒಟ್ಟು 90 ನಿಮಿಷಗಳ ಚರ್ಚೆಯಲ್ಲಿ ಇಬ್ಬರು ಅಭ್ಯರ್ಥಿಗಳು ಒಬ್ಬರಿಗೊಬ್ಬರು ತೀವ್ರವಾಗಿ ಆರೋಪಗಳ ಸುರಿಮಳೆ ಗೈದಿದ್ದಾರೆ.

ಟ್ರಂಪ್‌ ಅವರ 10 ಸುಳ್ಳುಗಳು
1. ನಾನು ಒಬಾಮಾ ಸರಕಾರದ ಶುದ್ಧ ವಿದ್ಯುತ್‌ ಯೋಜನೆಯನ್ನು ಸಂಪೂರ್ಣಗೊಳಿಸಿದ್ದೇನೆ. ಆದರೆ ಈ ಯೋಜನೆ ಬಹುಪಾಲು ಕಾರ್ಯಗತಗೊಂಡಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಇದನ್ನು ತಾತ್ಕಾಲಿಕವಾಗಿ 2016ರಲ್ಲಿ ನಿಷೇಧಿಸಿತು.

2. ಕ್ಯಾಲಿಫೋರ್ನಿಯಾ ಕಾಡುಗಳು ಬೆಂಕಿಗೆ ಬಲಿಯಾಗುತ್ತಿವೆ ಎಂದು ನನಗೆ ಪ್ರತಿ ವರ್ಷ ಕರೆಗಳು ಬರುತ್ತವೆ. ಇದಕ್ಕೆ ಕಳಪೆ ಅರಣ್ಯ ನಿರ್ವಹಣೆ ಕಾರಣವಾಗಿದೆ. ಆದರೆ ನಿಜಾಂಶ ಏನೆಂದರೆ, ಅಮೆರಿಕದ 13 ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಹೇಳುವಂತೆ ಜಾಗತಿಕ ತಾಪಮಾನ ಏರಿಕೆ ಇದಕ್ಕೆ ಕಾರಣವಾಗಿದೆ. ಕಳಪೆ ಅರಣ್ಯ ನಿರ್ವಹಣೆ ಕೂಡ ಒಂದು ಕಾರಣವಾಗಿದ್ದು ಇದರ ಪಾತ್ರ ಅತ್ಯಂತ ಕಡಿಮೆ.

3. ಪೋರ್ಟ್‌ಲ್ಯಾಂಡ್‌ನ‌ ಶೆರಿಫ್ ನನಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಟ್ರಂಪ್‌ ಹೇಳಿದ್ದರು. ಆದರೆ ಪೋರ್ಟ್‌ಲ್ಯಾಂಡ್‌ನ‌ ಶೆರಿಫ್ ಮೈಕ್‌ ರೀಸ್‌ ಅವರು ಎಂದಿಗೂ ಟ್ರಂಪ್‌ಗೆ ಬೆಂಬಲ ನೀಡುವುದಿಲ್ಲ ಎಂದು ಟ್ವೀಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

4. ನಾನು ಎಲೆಕ್ಟ್ರಿಕ್‌ ಕಾರುಗಳ ಪರವಾಗಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ನಿಜಾಂಶ ಏನೆಂದರೆ 2019 ರಲ್ಲಿ ಟ್ರಂಪ್‌ ಆಡಳಿತವು ಎಲೆಕ್ಟ್ರಿಕ್‌ ಕಾರುಗಳ ಖರೀದಿಯ ಮೇಲಿನ 7500ರ ತೆರಿಗೆ ಸಾಲವನ್ನು ರದ್ದುಗೊಳಿಸಿತ್ತು.

5. ಪ್ರಜಾಪ್ರಭುತ್ವವಾದಿಗಳು ಹಸುವನ್ನು ವಿರೋಧಿಸುತ್ತಾರೆ ಎಂದು ಟ್ರಂಪ್‌ ಆರೋಪಿಸಿದ್ದಾರೆ. ಆದರೆ ಇಲ್ಲಿ ವಿಪರ್ಯಾಸ ಎಂದರೆ ಬಿಡೆನ್‌ ಅವರು ಈ ಕುರಿತಂತೆ ಎಲ್ಲೂ ಹೇಳಿಯೇ ಇಲ್ಲ.  ಹಸು ಅಥವಾ ಎಮ್ಮೆ ಮೀಥೇನ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ. ಅವು ಪರಿಸರಕ್ಕೆ ಹಾನಿಕಾರಕ ಎಂದು ಮ್ಯಾಸಚೂಸೆಟ್ಸ್‌ ಮತ್ತು ನ್ಯೂಯಾರ್ಕ್‌ ಸೆನೆಟರ್‌ಗಳು ಈ ವರದಿಯನ್ನು ನೀಡಿದ್ದಾರೆ.

6. ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್‌ ಫ್ಲಾಯ್ಡ ಹತ್ಯೆಯ ಅನಂತರ ಅಲ್ಲಿಗೆ ಸೇನೆಯನ್ನು ಕಳುಹಿಸಲಾಗಿತ್ತು ಇದರ ಪರಿಣಾಮವಾಗಿ ಅಲ್ಲಿ ಹಿಂಸಾಚಾರ ಅಲ್ಲಿ ನಿಂತುಹೋಯಿತು ಎಮದು ಹೇಳಿದ್ದಾರೆ. ಆದರೆ ಸೇನೆಯನ್ನು ಕಳುಹಿಸಲು ಗವರ್ನರ್‌  ಮನವಿ ಮಾಡಿದ್ದರು.

7. ನಾವು 25ರಿಂದ 35 ಸಾವಿರ ಜನರನ್ನು ವಿಮಾನ ನಿಲ್ದಾಣಗಳಲ್ಲಿ ಸ್ವೀಕರಿಸುತ್ತೇವೆ ಎಂದಿದ್ದರು ಟ್ರಂಪ್‌. ಆದರೆ ವಿಮಾನ ನಿಲ್ದಾಣಗಳಲ್ಲಿ ಅಷ್ಟು ಪ್ರಮಾಣದ ಜನರಿಗೆ ಸ್ಥಳವಿರುವುದಿಲ್ಲ ಉದಾಹರಣೆಗೆ ಅವರು ವರ್ಜೀನಿಯಾದಲ್ಲಿ ರ್ಯಾಲಿಗಾಗಿ ಬಂದಾಗ ಕೇವಲ 3 ಸಾವಿರ ಜನರು ಇದ್ದರು.

8. ನಾನು 70 ಸಾವಿರ ಉದ್ಯೋಗಗಳನ್ನು ಜನರಿಗೆ ನೀಡಿದ್ದೇನೆ. ಆದರೆ ಸಾಂಕ್ರಾಮಿಕಕ್ಕೆ ಮೊದಲೇ ಉತ್ಪಾದನಾ ಕ್ಷೇತ್ರದಲ್ಲಿ 70 ಸಾವಿರ ಉದ್ಯೋಗಗಳನ್ನು ತರಲು ಟ್ರಂಪ್‌ ಅವರಿಗೆ ಸಾಧ್ಯವಾಗಿರಲಿಲ್ಲ.

9. ಮಕ್ಕಳು ಮತ್ತು ಯುವಕರಿಗೆ ಕೋವಿಡ್‌ ಯಾವುದೇ ಸಮಸ್ಯೆಯನ್ನುಂಟು ಮಾಡುವ ಅಪಾಯ ಇಲ್ಲ. ನಿಜಾಂಶ ಎಂದರೆ ಮಕ್ಕಳು ಮತ್ತು ಯುವಕರು ಸಹ ಇಂದು ಸೋಂಕಿನ ಅಪಾಯದಲ್ಲಿದ್ದಾರೆ ಎಂಬುದು ಅನೇಕ ಸಂಶೋಧನೆಗಳಲ್ಲಿ ಸ್ಪಷ್ಟವಾಗಿದೆ.

10. ನಾನು ಮಿಲಿಯನ್‌ ಡಾಲರ್‌ ತೆರಿಗೆಯನ್ನು ಸಂಗ್ರಹಿಸಿದ್ದೇನೆ. ಆದರೆ 2017ರಲ್ಲಿ ಅಧ್ಯಕ್ಷರು ಕೇವಲ 750 ಡಾಲರ್‌ ತೆರಿಗೆ ಪಾವತಿಸಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳುತ್ತದೆ.

ಬಿಡೆನ್‌ ಅವರ ಆ ಎರಡು ಸುಳ್ಳುಗಳು
1. ಡೆಮಾಕ್ರಟಿಕ್‌ ಅಧಿಕಾರದ ಕಾಲದಲ್ಲಿ ಆರ್ಥಿಕತೆಯು ಬಲವಾಗಿತ್ತು. ಟ್ರಂಪ್‌ ಆರ್ಥಿಕ ಹಿಂಜರಿತವನ್ನು ತಂದಿದ್ದೀರಿ ಎಂದಿದ್ದರು. ಒಬಾಮಾ ಸರಕಾರದ ಕೊನೆಯ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆಗ ಬಿಡೆನ್‌ ಉಪಾಧ್ಯಕ್ಷರಾಗಿದ್ದರು. 2016ರಲ್ಲಿ ಆರ್ಥಿಕ ಬೆಳವಣಿಗೆ ಶೇ.2ರಷ್ಟು ಇಳಿದಿತ್ತು.

2. ಚೀನ ಈಗ ಹೆಚ್ಚಿನ ವ್ಯಾಪಾರ ಕೊರತೆಯನ್ನು ಹೊಂದಿದೆ ಎಂದು ಬೈಡನ್‌ ಹೇಳಿದ್ದಾರೆ. ಆದರೆ ವ್ಯಾಪಾರ ಕೊರತೆಯನ್ನು 2018 ಮತ್ತು 2019ರಲ್ಲಿ ಕಡಿಮೆ ಮಾಡಲಾಗಿದೆ. ವ್ಯಾಪಾರ ಕೊರತೆ ಎಂಬುದು ಇತರ ದೇಶಗಳಲ್ಲೂ ಇದೆ. ಈಗ ವ್ಯಾಪಾರ ಕೊರತೆ ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next