ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ರಾಜ್ಯದ ಮೊಟ್ಟ ಮೊದಲ ಈರುಳ್ಳಿ ಶೇಖರಣಾ ಘಟಕಗಳನ್ನು ಆರಂಭಿಸಲಾಗಿದೆ. ರಾಜಾ ಈರುಳ್ಳಿ (ಸಾಂಬಾರ್ ಈರುಳ್ಳಿ)ಯನ್ನು ಕೊಯ್ಲು ಮಾಡಿದ ಬಳಿಕ ಒಂದೂವರೆ ತಿಂಗಳಿಂದ ಎರಡು ತಿಂಗಳು ಸುರಕ್ಷಿತವಾಗಿರಿಸಿ ಒಣಗಿಸುವ ಸಲುವಾಗಿ ಈ ಘಟಕಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ವಿವಿಧ ಹೋಬಳಿಗಳಲ್ಲಿ 50 ಘಟಕಗಳನ್ನು ತೆರೆಯಲು ಅನುದಾನ ಬಿಡುಗಡೆ ಮಾಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಈರುಳ್ಳಿ ಶೇಖರಣಾ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಪ್ರಸಕ್ತ ವರ್ಷ ನಾಗಮಂಗಲ ತಾಲೂಕಿನ ದೇವಲಾಪುರ, ಹೊಣಕೆರೆ, ಕಸಬಾ, ಬೆಳ್ಳೂರು ಹಾಗೂ ಬಿಂಡಿಗನವಿಲೆ ಹೋಬಳಿಗಳಲ್ಲಿ 50 ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ವರ್ಷ 200 ಘಟಕಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.
ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ:ಜಿಲ್ಲೆಯಲ್ಲಿ ನಾಗಮಂಗಲ ತಾಲೂಕು ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ. ತಾಲೂಕಿನ 1700 ಎಕರೆ ಪ್ರದೇಶದಲ್ಲಿ ರೈತರು ರಾಜಾ ಈರುಳ್ಳಿ ಬೆಳೆಯುತ್ತಿದ್ದಾರೆ. 1200 ರಿಂದ 1300 ಈರುಳ್ಳಿ ಬೆಳೆಗಾರರು ತಾಲೂಕಿನಲ್ಲಿದ್ದಾರೆ. ಸಾಂಬಾರ್ ಈರುಳ್ಳಿಯಾಗಿರುವ ರಾಜಾ ಈರುಳ್ಳಿಗೆ ರಾಜ್ಯ, ಹೊರರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಹೆಚ್ಚಿನ ಬೇಡಿಕೆ ಇದೆ.
ಶೇಖರಣೆ ಹೇಗೆ?: ಈರುಳ್ಳಿ ಶೇಖರಣಾ ಘಟಕವನ್ನು ಒಂದು ಟನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಗೋದಾಮಿನ ಮಾದರಿಯಲ್ಲಿ ಸುತ್ತಲೂ ಗೋಡೆಯನ್ನು ನಿರ್ಮಿಸಲಾಗುವುದು. ಮೇಲ್ಭಾಗಕ್ಕೆ ಕಬ್ಬಿಣದ ಕಂಬಿಗಳನ್ನು ಆಧಾರವಾಗಿಸಿಕೊಂಡು ಛಾವಣಿಗೆ ಜಿಂಕ್‌ಶೀಟ್ ಅಳವಡಿಸಲಾಗುತ್ತದೆ. ನಂತರ ಕೊಯ್ಲಿಗೆ ಬಂದ ರಾಜಾ ಈರುಳ್ಳಿಯನ್ನು ಗೊಂಚಲು ಮಾಡಿ ಕಬ್ಬಿಣದ ಕಂಬಿಗಳಿಗೆ ತೂಗು ಹಾಕಲಾಗುವುದು. ಜಿಂಕ್‌ಶೀಟ್ ಮೇಲೆ ಬಿಸಿಲ ತಾಪ ಬೀಳುವುದರಿಂದ ಶಾಖ ಹೆಚ್ಚಿ ಈರುಳ್ಳಿ ಒಣಗಲು ಅನುಕೂಲವಾಗುತ್ತದೆ.
ಮೂರು ತಿಂಗಳ ಬಳಿಕ ಈರುಳ್ಳಿಯನ್ನು ತೆಗೆದು ಮಾರಾಟಕ್ಕೆ ಅಣಿಗೊಳಿಸಲಾಗುವುದು. ಮೂರು ತಿಂಗಳ ನಂತರ ಈರುಳ್ಳಿಯನ್ನು ಹಾಗೆಯೇ ಬಿಟ್ಟರೆ ಸತ್ವಹೀನವಾಗುತ್ತದೆ. ಮೊಳಕೆಯೊಡೆಯಲು ಶುರು ವಾಗುತ್ತದೆ. ಅದಕ್ಕಾಗಿ ಕೊಯಾÉದ ಒಂದೂವರೆ ಯಿಂದ ಮೂರು ತಿಂಗಳು ಶೇಖರಿಸಿಟ್ಟು ಮಾರಾಟ ಮಾಡಿದರೆ ಉತ್ತಮ ಲಾಭ ದೊರಕುತ್ತದೆ.
ಉತ್ತಮ ಬೆಲೆ: ದಪ್ಪ ಹಾಗೂ ದುಂಡನೆಯ ಈರುಳ್ಳಿಗಿಂತಲೂ ರಾಜಾ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಹಾಗೂ ಇದರ ಬೆಲೆಯೂ ಹೆಚ್ಚು. ಪ್ರಸಕ್ತ ಮಾರುಕಟ್ಟೆಯಲ್ಲಿ ರಾಜಾ ಈರುಳ್ಳಿ ಕ್ವಿಂಟಾಲ್‌ಗೆ 2000 ರೂ.ನಿಂದ 2500 ರೂ.ವರೆಗೆ ಬೆಲೆ ಇದೆ.
ಈರುಳ್ಳಿ ಶೇಖರಣಾ ಘಟಕಗಳನ್ನು ರಾಜ್ಯದಲ್ಲೇ ಮೊದಲಿಗೆ ನಾಗಮಂಗಲದಲ್ಲಿ ಆರಂಭಿಸಲಾಗಿದೆ. ರಾಜಾ ಈರುಳ್ಳಿಯನ್ನು ಉತ್ತಮ ರೀತಿಯಲ್ಲಿ ಶೇಖರಿಸಿಡಲು ಘಟಕಗಳು ಅನುಕೂಲಕರವಾಗಿವೆ. ಈ ಘಟಕಗಳಿಗೆ ಸಹಜವಾಗಿ ಬೇಡಿಕೆಯೂ ಹೆಚ್ಚಿದ್ದು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಈ ವರ್ಷ 50 ಘಟಕಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಮುಂದಿನ ವರ್ಷ 200 ಘಟಕಗಳಿಗೆ ಬೇಡಿಕೆ ಬಂದಿದೆ. ಈರುಳ್ಳಿ ಬೆಳೆಯಲು ರೈತರೂ ಹೆಚ್ಚು ಆಸಕ್ತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
– ಶಾಂತಾ, ತೋಟಗಾರಿಕೆ
ಇಲಾಖೆ ಸಹಾಯಕ ನಿರ್ದೇಶಕಿ