Advertisement
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಯುವ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್ (70), ವಿಕೆಟ್ ಕೀಪರ್ ರಿಷಭ್ ಪಂತ್ (71) ಮತ್ತು ಕೇಧಾರ್ ಜಾಧವ್ (40) ಅವರು ಆಸರೆಯಾದರು. ಇವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 50 ಓವರುಗಳಲ್ಲಿ 07 ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳನ್ನು ಕಲೆಹಾಕಿತು.ಭಾರತದ ಆರಂಭ ನಿರಾಶಾದಾಯಕವಾಗಿತ್ತು. ತಂಡದ ಮೊತ್ತ ಕೇವಲ 21 ರನ್ ಗಳಾಗುವಷ್ಟರಲ್ಲಿ ಕೆ.ಎಲ್. ರಾಹುಲ್ (06) ಅವರು ಕಾಟ್ರೆಲ್ ಬೌಲಿಂಗ್ ನಲ್ಲಿ ಔಟಾದರು. ಇದರ ಬೆನ್ನಲ್ಲೇ ಕೇವಲ ನಾಲ್ಕು ರನ್ ಗಳಿಸಿ ವಿರಾಟ್ ಕೊಹ್ಲಿ ಕೂಡಾ ಪೆವಿಲಿಯನ್ ಸೇರಿದ್ದು ಟೀಂ ಇಂಡಿಯಾದ ಬ್ಯಾಟಿಂಗ್ ಸಂಕಟವನ್ನು ಹೆಚ್ಚಿಸಿತು. ಆದರೆ ಈ ಹಂತದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ (36) ಅವರಿಗೆ ಜೊತೆಯಾದ ಶ್ರೇಯಸ್ ಅಯ್ಯರ್ (70) ಎಚ್ಚರಿಕೆಯ ಆಟಕ್ಕೆ ತೊಡಗಿದರು. ಈ ಜೋಡಿ ಮೂರನೇ ವಿಕೆಟಿಗೆ ಅಮೂಲ್ಯ 55 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 36 ರನ್ ಗಳಿಸಿದ್ದ ಶರ್ಮಾ ಜೋಸೆಫ್ ಬೌಲಿಂಗ್ ನಲ್ಲಿ ಔಟಾದರು.
ನಾಲ್ಕನೇ ವಿಕೆಟಿಗೆ ಬ್ಯಾಟ್ ಹಿಡಿದು ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಅಯ್ಯರ್ ಜೊತೆ ಸೇರಿಕೊಂಡು ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. ವೆಸ್ಟ್ ಇಂಡೀಸ್ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದ ಈ ಯುವ ಜೋಡಿ ನಾಲ್ಕನೇ ವಿಕೆಟಿಗೆ ಅತ್ಯಮೂಲ್ಯ 114 ರನ್ ಭಾಗೀದಾರಿಕೆ ನೀಡಿದರು. ವೇಗದ ಆಟವಾಡಿದ ಪಂತ್ 69 ಎಸೆತೆಗಳಲ್ಲಿ 01 ಸಿಕ್ಸರ್ ಹಾಗೂ 07 ಬೌಂಡರಿ ನೆರವಿನಿಂದ 71 ರನ್ ಬಾರಿಸಿದರೆ ಶ್ರೇಯಸ್ ಅಯ್ಯರ್ ಅವರು 88 ಎಸೆತೆಗಳಲ್ಲಿ 70 ರನ್ ಬಾರಿಸಿದರು. ಇದರಲ್ಲಿ 05 ಬೌಂಡರಿ ಹಾಗೂ 01 ಸಿಕ್ಸರ್ ಒಳಗೊಂಡಿತ್ತು.
ಶ್ರೇಯಸ್ ಐಯರ್ ವಿಕೆಟ್ ಬಿದ್ದ ಮೇಲೆ ಕ್ರೀಸಿಗೆ ಆಗಮಿಸಿದ ಇನ್ನೋರ್ವ ಯುವ ಬ್ಯಾಟ್ಸ್ ಮನ್ ಕೇದಾರ್ ಜಾಧವ್ (40) ಅವರು ಸ್ಲ್ಯಾಗ್ ಓವರ್ ನಲ್ಲಿ ಸಿಡಿದು ನಿಂತರು. ಅನುಭವಿ ರವೀಂದ್ರ ಜಡೇಜಾ (21) ಅವರೊಂದಿಗೆ ಸೇರಿಕೊಂಡು 59 ರನ್ ಗಳ ಜೊತೆಯಾಟ ನೀಡಿದರು. ಈ ಜೋಡಿ ಕ್ರೀಸಿನಲ್ಲಿರುವವರೆಗೆ ಭಾರತ 300ರ ಗಡಿ ದಾಟಬಹುದೆಂಬ ನಿರೀಕ್ಷೆ ಇತ್ತು. ಆದರೆ ಜಾಧವ್ ಹಾಗೂ ಜಡೇಜಾ ಒಟ್ಟಿಗೇ ಔಟಾಗುವುದರೊಂದಿಗೆ ಈ ನಿರೀಕ್ಷೆ ಹುಸಿಯಾಯಿತು.
ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ಸಂಘಟಿಸಿದ ವೆಸ್ಟ್ ಇಂಡೀಸ್ ಭಾರತದ ಘಟಾನುಘಟಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಕೆರಿಬಿಯನ್ನರ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದು ಅಯ್ಯರ್ ಮತ್ತು ಪಂತ್ ಜವಾಬ್ದಾರಿಯುತ ಜೊತೆಯಾಟ.