ಮೈಸೂರು: ರಾಜಕೀಯ ಪಕ್ಷಗಳ ಜತೆಗೆ ಹಲವು ರಾಜಕಾರಣಿಗಳ ಏಳು-ಬೀಳು ನಿರ್ಧರಿಸಲಿರುವ ವಿಧಾನಸಭಾ ಚುನಾವಣೆಗಾಗಿ ಶನಿವಾರ ನಡೆದ ಮತದಾನ ಪ್ರಕ್ರಿಯೆ ಹಿರಿಯರು ಹಾಗೂ ಕಿರಿಯರ ಸಮಾಗಮಕ್ಕೆ ವೇದಿಕೆಯಾಯಿತು. ನಗರದ ಹಲವು ಕ್ಷೇತ್ರಗಳಲ್ಲಿ ಹಿರಿಯರ ಜತೆಗೆ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರು ಸಂಭ್ರಮಿಸಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಿಂದ ಒಟ್ಟು 25 ಸಾವಿರ ಯುವ ಮತದಾರರು ಮೊದಲ ಬಾರಿಗೆ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದರು. ಹೀಗಾಗಿ ಪ್ರಥಮ ಬಾರಿಗೆ ವೋಟ್ ಹಾಕುವ ಅವಕಾಶ ಪಡೆದ ನಗರ ವ್ಯಾಪ್ತಿಯ ನೂರಾರು ಯುವ ಮತದಾರರು ತಮ್ಮ ಕ್ಷೇತ್ರದ ಮಟ್ಟಗಟ್ಟೆಗೆ ತೆರಳಿ ವೋಟ್ ಹಾಕಿ ಖುಷಿಪಟ್ಟರೆ, ಇವರೊಂದಿಗೆ ಅನೇಕ ಹಿರಿಯ ಮತದಾರರು ಮತದಾನ ಮಾಡಿ, ತಮ್ಮ ಹಕ್ಕು ಚಲಾಯಿಸಿದರು.
ಹೀಗಾಗಿ ಮತದಾನ ಪ್ರಕ್ರಿಯೆ ಹಿರಿಯ ಹಾಗೂ ಕಿರಿಯ ಮತದಾರರ ಸಮಾಗಮಕ್ಕೆ ಕಾರಣವಾಯಿತು. ಕೆಲವು ಯುವ ಮತದಾರರು ತಂದೆ-ತಾಯಿ, ಅಜ್ಜ-ಅಜ್ಜಿಯ ಜತೆಯಲ್ಲಿ ಮತಗಟ್ಟೆಗೆ ತೆರಳಿದರೆ, ಇನ್ನೂ ಕೆಲವರು ತಮ್ಮ ಸ್ನೇಹಿತರೊಂದಿಗೆ ಮತಗಟ್ಟೆಗೆ ಬಂದು ವೋಟ್ ಮಾಡಿದರು.
ಫಸ್ಟ್ ವೋಟರ್: ಚುನಾವಣೆಯ ಅಂಗವಾಗಿ ರೂಪಿಸಲಾಗಿದ್ದ ಸ್ವೀಪ್ ಸಮಿತಿ ರಾಯಬಾರಿ ನಿವೇದಿತಗೌಡ ಈ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಇನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಯದುವೀರ್ 2013ರ ಚುನಾವಣೆಯಲ್ಲಿ ಅಮೆರಿಕಾದಲ್ಲಿ ವಾಸವಿದ್ದ ಕಾರಣ ಈ ಬಾರಿಯ ವೋಟ್ ಮಾಡಿದರು.
ಅಲ್ಲದೆ ಕಾಂಗ್ರೆಸ್ ಮುಖಂಡ ಹಾಗೂ ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಪುತ್ರಿ ವಿ.ರಚನಾ ಜೆ.ಪಿ.ನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಇವರಲ್ಲದೆ ಕೆ.ಆರ್.ಕ್ಷೇತ್ರದ ನಿವಾಸಿ ಹಾಗೂ ಅಕ್ಕ-ತಂಗಿಯಾದ ಶ್ರೀರûಾ ಮತ್ತು ಶ್ರೀನಿಧಿ ಅವರು ಪ್ರಥಮ ಬಾರಿಗೆ ಮತದಾನ ಮಾಡುವ ಮೂಲಕ ಖುಷಿಪಟ್ಟರು.