Advertisement
ರಾಷ್ಟ್ರವೊಂದು ಟೆಸ್ಟ್ ಮಾನ್ಯತೆ ಪಡೆದು ತನ್ನ ಮೊದಲ ಟೆಸ್ಟ್ ಆಡಲಿಳಿಯುವಾಗ ಆ ತಂಡದ ನಾಯಕನಿಗೂ ಇದು ಮೊದಲ ಅನುಭವವಾಗಿರುತ್ತದೆ. ಇದು ಬೇರೆ ಸಂಗತಿ. ಆಸ್ಟ್ರೇಲಿಯದ ಡೇವ್ ಗ್ರೆಗರಿ ಮತ್ತು ಇಂಗ್ಲೆಂಡಿನ ಜೇಮ್ಸ್ ಲಿಲ್ಲಿವೈಟ್ ಟೆಸ್ಟ್ ಕ್ರಿಕೆಟಿನ ಪ್ರಪ್ರಥಮ ನಾಯಕರು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಇತಿಹಾಸದ ಮೊದಲ ಪಂದ್ಯ ನಡೆದಾಗ ಇವರಿಬ್ಬರು ತಂಡಗಳ ಸಾರಥ್ಯ ವಹಿಸಿದ್ದರು. ಇದು ಎಲ್ಲರ ಪಾಲಿಗೂ ಚೊಚ್ಚಲ ಟೆಸ್ಟ್ ಆಗಿತ್ತು. ಹಾಗೆಯೇ ಭಾರತದ ಪಾಲಿನ ಹೆಗ್ಗಳಿಕೆ ಕರ್ನಲ್ ಸಿ.ಕೆ. ನಾಯ್ಡು ಅವರಿಗೆ ಸಲ್ಲುತ್ತದೆ.
ಆದರೆ ಎಲ್ಲ ಟೆಸ್ಟ್ ದೇಶಗಳ ಮೊದಲ ಪಂದ್ಯಗಳ ನಿದರ್ಶನಗಳನ್ನು ಹೊರತುಪಡಿಸಿ ಅವಲೋಕಿಸಿದರೆ ತಮ್ಮ ಮೊದಲ ಪಂದ್ಯದಲ್ಲೇ ನಾಯಕತ್ವದ ಕಿರೀಟ ಧರಿಸಿದ ಅನೇಕರು ಕಂಡುಬರುತ್ತಾರೆ. 1995ರಲ್ಲಿ ಭಾರತದೆದುರಿನ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡದ ನಾಯಕನಾದ ಲೀ ಜರ್ಮನ್ ಇವರಲ್ಲೊಬ್ಬರು. ಹಿಂದಿನ ನಾಯಕ ಕೆನ್ ರುದರ್‌ಫೋರ್ಡ್ ಸತತ ವೈಫಲ್ಯ ಅನುಭವಿಸಿದ ಬಳಿಕ ಅಲ್ಲಿನ ಕ್ರಿಕೆಟ್ ಮಂಡಳಿ ಇಂಥದೊಂದು ಅಚ್ಚರಿಯ ಹೆಜ್ಜೆ ಇರಿಸಿತ್ತು. ಆದರೆ ಆಗ ನ್ಯೂಜಿಲ್ಯಾಂಡ್ ತಂಡದ ನಾಯಕತ್ವದ ರೇಸ್‌ನಲ್ಲಿ ಮಾರ್ಟಿನ್ ಕ್ರೋವ್, ಕ್ರಿಸ್ ಹ್ಯಾರಿಸ್, ಆ್ಯಡಂ ಪರೋರೆ, ಗೆವಿನ್ ಲಾರ್ಸೆನ್ ಮೊದಲಾದ ಅನುಭವಿಗಳಿದ್ದರು. ಆದರೆ ಈ ಅನುಭವಿಗಳನ್ನೆಲ್ಲ ಕೈಬಿಟ್ಟು ಇನ್ನೂ ಟೆಸ್ಟ್ ಪಂದ್ಯವನ್ನೇ ಆಡದ ವಿಕೆಟ್ ಕೀಪರ್ ಲೀ ಜರ್ಮನ್ ಅವರನ್ನು ಕಪ್ತಾನನ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಆಗ ಜರ್ಮನ್ ಕೂಡ ಇದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ!