ಇನ್ನೇನು ಆಕೆ ರೈಲು ಹತ್ತಿಯೇ ಬಿಡುತ್ತಾಳೆ, ಎಲ್ಲವೂ ಅಂದುಕೊಂಡಂತೆ ಆಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಆತನಿಗೆ ದೊಡ್ಡ ಶಾಕ್ ಕಾದಿರುತ್ತದೆ. ಆತ ಹೇಗೋ ಆ ಶಾಕ್ ಅನ್ನು ನಿಭಾಹಿಸಿ ಮುಂದೆ ಹೋಗುವಷ್ಟರಲ್ಲಿ ಮತ್ತೂಂದು ಟ್ವಿಸ್ಟ್. ಈ ಟ್ವಿಸ್ಟ್ ಕೇವಲ ಆತನಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ. ಆ ಟ್ವಿಸ್ಟ್ ಇಲ್ಲದಿದ್ದರೆ “ಫಸ್ಟ್ ಲವ್’ ಒಂದು ಮಾಮೂಲಿ ಸಿನಿಮಾವಾಗುತ್ತಿತ್ತು. ಆದರೆ, ನಿರ್ದೇಶಕರು ಕ್ಲೈಮ್ಯಾಕ್ಸ್ ವೇಳೆ ಕೊಟ್ಟ ಟ್ವಿಸ್ಟ್ ಸಿನಿಮಾದ ಪ್ಲಸ್ ಎನ್ನಬಹುದು. ಅಷ್ಟಕ್ಕೂ ಆ ಅಂಶ ಏನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಿ.
ಹೆಸರಿಗೆ ತಕ್ಕಂತೆ “ಫಸ್ಟ್ ಲವ್’ ಒಂದು ಲವ್‌ಸ್ಟೋರಿ. ಮೊದಲ ನೋಟಕ್ಕೆ ಲವ್ ಆಗುವ ಹುಡುಗಿಯನ್ನೇ ಪಡೆಯಬೇಕೆಂಬ ನಾಯಕನ ಬಯಕೆ ಹಾಗೂ ಆ ನಡುವೆ ಎದುರಾಗುವ ಸನ್ನಿವೇಶಗಳೇ ಈ ಸಿನಿಮಾದ ಜೀವಾಳ. ಈ ಕಥೆಯನ್ನು ಬೇರೆ ತರಹ ಹೇಳಲು ಪ್ರಯತ್ನಿಸಿರುವ ಮೂಲಕ ಸಿನಿಮಾ ಕೊಂಚ ಇಷ್ಟವಾಗುತ್ತದೆ. ಹಾಗಂತ ಅದ್ಭುತ ಸಿನಿಮಾನಾ, ಎಂದರೆ ಖಂಡಿತಾ ಇಲ್ಲ. ಇಲ್ಲೂ ನಿರ್ದೇಶಕರು ಒಂದು ಲವ್‌ಸ್ಟೋರಿಯನ್ನು ಕಟ್ಟಿಕೊಡಲು ಆರಂಭದಲ್ಲಿ ಅನುಸರಿಸಿರೋದು ಅದೇ ರೆಗ್ಯುಲರ್ ಫಾರ್ಮುಲಾ.
ಮೊದಲ ನೋಟಕ್ಕೆ ಫಿದಾ ಆಗೋ ಹುಡುಗ, ಆರಂಭದಲ್ಲಿ ನಿರಾಕರಿಸೋ ಹುಡುಗಿ, ಮಧ್ಯೆ ಒಂದು ಫೈಟ್, ನಂತರ ನಾಯಕನ ಬಗ್ಗೆ ಮರುಕ, ಈ ನಡುವೆಯೇ ಸ್ನೇಹಿತನ ಕಾಮಿಡಿ … ಈ ತರಹದ ಅಂಶಗಳ ಮೂಲಕವೇ ಸಿನಿಮಾ ಆರಂಭವಾಗುತ್ತದೆ. ಹಾಗಾಗಿ, ಸಿನಿಮಾದಲ್ಲಿ ಬಹುತೇಕ ಇಂತಹ ಅಂಶಗಳೇ ತುಂಬಿಕೊಂಡಿವೆ. ಒಬ್ಬ ಲವರ್‌ಬಾಯ್ ಹೇಗೆಲ್ಲಾ ವರ್ತಿಸಬಹುದು, ಅವೆಲ್ಲವನ್ನೂ ಇಲ್ಲಿನ ಹೀರೋ ಕೂಡಾ ಮಾಡಿದ್ದಾರೆ. ಈ ಹಿಂದೆಯೂ ಅನೇಕ ಸಿನಿಮಾಗಳಲ್ಲಿ ಇದನ್ನು ನೋಡಿರುವ ಪ್ರೇಕ್ಷಕರಿಗೆ ಈ ಅಂಶಗಳಲ್ಲಿ ಹೊಸತನ ಕಾಣಿಸೋದಿಲ್ಲ.
ಸಿನಿಮಾ ನಿಮಗೆ ಕೊಂಚ ಇಷ್ಟವಾಗೋದು ಹಾಗೂ ವಿಭಿನ್ನತೆ ಮೆರೆಯಲು ಪ್ರಯತ್ನಿಸಿದ್ದಾರೆ ಎಂದನಿಸೋದು ದ್ವಿತೀಯಾರ್ಧದಲ್ಲಿ. ಇಲ್ಲಿ ಪಾಲಕರ ನಿರ್ಧಾರ, ಆ ಮಧ್ಯೆ ನಡೆಯುವ ಕೆಲವು ಘಟನೆಗಳು ಸಿನಿಮಾದ ವೇಗವನ್ನು ಹೆಚ್ಚಿಸುತ್ತದೆ. ಚಿಂತಿಸುವ ವಿಷಯ ಇದೆ ಎನಿಸುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್ ವೇಳೆ ಎದುರಾಗುವ ಟ್ವಿಸ್ಟ್‌ಗಳು ಚಿತ್ರ ಕೊಟ್ಟ ಆರಂಭದ ಬೇಸರವನ್ನು ಮರೆಸುತ್ತವೆ ಕೂಡಾ. ಆ ಮಟ್ಟಿಗೆ ಒಂದಷ್ಟು ಹೊಸತನ ಮೆರೆದಿದೆ ಚಿತ್ರತಂಡ.
ಚಿತ್ರದಲ್ಲಿ ಬರುವ ಕಾಮಿಡಿ, ಫ್ಯಾಮಿಲಿ ಡ್ರಾಮಾ ಲವ್‌ಸ್ಟೋರಿಯ ಓಘಕ್ಕೆ ಅಡ್ಡಿಯಾಗಿವೆ. ಅವೆಲ್ಲವನ್ನು ಬದಿಗೆ ಸರಿಸಿ ಲವ್‌ಸ್ಟೋರಿಯನ್ನು ಮತ್ತಷ್ಟು ಗಂಭೀರವಾಗಿ ಹೇಳಬಹುದಿತ್ತು. ನಾಯಕ ರಾಜೇಶ್ ತುಂಟ ಪ್ರೇಮಿಯಾಗಿ ಇಷ್ಟವಾದರೆ, ಗಂಭೀರ ದೃಶ್ಯಗಳಲ್ಲಿ ಮತ್ತಷ್ಟು ಪಳಗಬೇಕಿದೆ. ನಾಯಕಿ ಕವಿತಾ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸ್ನೇಹಾ ಗ್ಲಾಮರಸ್ ಹಾಡಿಗಷ್ಟೇ ಸೀಮಿತ. ಸಿದ್ಧಿ ಪ್ರಶಾಂತ್ ಕಾಮಿಡಿ ನಗು ತರಿಸೋದಿಲ್ಲ. ಶ್ರೀಧರ್ ಸಂಭ್ರಮ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ: ಫಸ್ಟ್‌ಲವ್
ನಿರ್ಮಾಣ: ಅಶೋಕ್ ಓ ಲಮಾಣಿ
ನಿರ್ದೇಶನ: ಮಲ್ಲಿ
ತಾರಾಗಣ: ರಾಜೇಶ್, ಕವಿತಾ, ಸ್ನೇಹಾ, ರಾಜು ತಾಳಿಕೋಟೆ, ಪ್ರಶಾಂತ್ ಮುಂತಾದವರು
* ರವಿ ರೈ