ಲಕ್ನೋ: ಉತ್ತರ ಪ್ರದೇಶ ರಾಜ್ಯದಲ್ಲಿ ಹೊಸದಾಗಿ ಜಾರಿಯಾದ ಲವ್ ಜಿಹಾದ್ ಕಾಯ್ದೆಯಡಿ ದಾಖಲಾಗಿದ್ದ ಮೊದಲ ಪ್ರಕರಣವೇ ತಿರುವು ಪಡೆದಿದೆ. ಲವ್ ಜಿಹಾದ್ ಆರೋಪವನ್ನು ಸ್ವತಃ ಯುವತಿಯೇ ತಳ್ಳಿಹಾಕಿದ್ದು, ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಅದೇ ಅಲ್ಲದೆ ಪೊಲೀಸರ ಕ್ರಮದ ನಂತರ ಆಶ್ರಯ ಸಂಸ್ಥೆ ಸೇರಿದ್ದ ಯುವತಿಗೆ ಗರ್ಭಪಾತವಾಗಿದೆ!
ಪಿಂಕಿ ಎಂಬ 22 ವರ್ಷದ ಯುವತಿಯು ಮೊರಾದಾಬಾದ್ ನ ರಶೀದ್ ಎಂಬ ಯುವಕನನ್ನು ಐದು ತಿಂಗಳ ಹಿಂದೆ ಮದುವೆಯಾಗಿದ್ದಳು. ಮದುವೆ ನಂತರ ಮಸ್ಕನ್ ಜಹಾನ್ ಆಗಿ ಬದಲಾಗಿದ್ದಳು. ಆದರೆ ಈ ವಿವಾಹದ ಬಗ್ಗೆ ಪಿಂಕಿ ಅಲಿಯಾಸ್ ಮಸ್ಕನ್ ಜಹಾನ್ ತಾಯಿ ನೀಡಿದ ದೂರಿನಂತೆ ಪೊಲೀಸರು ಆಕೆಯ ಪತಿ ರಶೀದ್ ನನ್ನು ಬಂಧಿಸಿ ಲವ್ ಜಿಹಾದ್ ಪ್ರಕರಣ ದಾಖಲಿಸಿದ್ದರು. ಯುವತಿಯನ್ನು ನಾರಿ ನಿಕೇತನ್ ಎಂಬ ಆಶ್ರಯ ಸಂಸ್ಥೆಗೆ ದಾಖಲಿಸಿದ್ದರು.
ಆದರೆ ಈ ವೇಳೆ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಸ್ಕನ್ ಜಹಾನ್ ಅಲಿಯಾಸ್ ಪಿಂಕಿ ಗೆ ಗರ್ಭಪಾತವಾಗಿದೆ. ಇದಕ್ಕೆ ಆಶ್ರಯ ಸಂಸ್ಥೆಯೇ ಕಾರಣ. ಗರ್ಭಪಾತವಾಗುವಂತೆ ಅವರು ಮಾತ್ರೆಗಳನ್ನು ಮತ್ತು ಚುಚ್ಚುಮದ್ದುಗಳನ್ನು ನೀಡಿದ್ದರು ಎಂದು ಆಕೆ ದೂರಿದ್ದಾರೆ.
ಲವ್ ಜಿಹಾದ್ ಆರೋಪವನ್ನು ಕೂಡಾ ಆಕೆ ನಿರಾಕರಿಸಿದ್ದು, ನಾನು ಯಾವುದೇ ಒತ್ತಡಕ್ಕೆ ಒಳಗಾಗದೆ, ನನ್ನ ಇಚ್ಛೆಯಂತೆ ಮದುವೆಯಾಗಿದ್ದೇನೆ. ನನ್ನ ತಾಯಿ ಮನೆಯವರೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇನೆ ಎಂದಿದ್ದಾರೆ.
ಯುವತಿಯ ಹೇಳಿಕೆಯನ್ನು ಪರಿಗಣಿಸಿ ಕೋರ್ಟ್ ಯುವತಿಯನ್ನು ಆಶ್ರಯ ಸಂಸ್ಥೆಯಿಂದ ಬಿಡುಗಡೆಗೊಳಿಸಿ, ಆಕೆಯ ಗಂಡನ ಮನೆಗೆ ಕಳುಹಿಸಲಾಗಿದೆ.