ಬೆಂಗಳೂರು: 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅನಂತರ “ಕಾಂಗ್ರೆಸ್ ನಡಿಗೆ ಜನರ ಬಳಿಗೆ’ ಎಂಬ ಘೋಷ ವಾಕ್ಯದೊಂದಿಗೆ ತಮ್ಮ ಹೋರಾಟವನ್ನು ಆರಂಭಿ ಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಈಗ 2018ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅದೇ ಮಾದರಿಯ ಕಾರ್ಯಕ್ರಮದ ಮೂಲಕ ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯ ವಿಸ್ತಾರಕ ಯೋಜನೆಗೆ ಪರ್ಯಾಯ ಎಂದೇ ಬಿಂಬಿತವಾಗುತ್ತಿರುವ ಬೂತ್ ಮಟ್ಟದ ಕಾರ್ಯಕರ್ತರನ್ನು ಬಳಸಿಕೊಂಡು, ಸೆಪ್ಟಂಬರ್ ಮೊದಲ ವಾರದಿಂದ “ಮನೆ ಮನೆಗೆ ಕಾಂಗ್ರೆಸ್’ ಎಂಬ ವಿನೂತನ ಯೋಜನೆ ಘೋಷಿಸಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಉಳಿದ ಹತ್ತು ತಿಂಗಳು ನಿರಂತರ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಿದ್ದು, ಬೂತ್ ಮಟ್ಟದ ಕಾರ್ಯಕರ್ತರ ಮೂಲಕ ನಿರಂತರ ಮತದಾರ ಸಂಪರ್ಕ ಬೆಳೆಸುವುದು. ಮತದಾರರ ಕಷ್ಟ-ಸುಖಗಳಿಗೆ ಸ್ಪಂದಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ಡ್ ಪಕ್ಷವನ್ನಾಗಿ ಪರಿವರ್ತಿಸಲು ಈ ಕಾರ್ಯತಂತ್ರ ಹೆಣೆದಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ 66 ಸಾವಿರ ಬೂತ್‌ಗಳ ಮೂಲಕ 6 ಲಕ್ಷ 50 ಸಾವಿರಕ್ಕೂ ಹೆಚ್ಚು ಬೂತ್ ಮಟ್ಟದ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ಅಣಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
– ಈಗಾಗಲೇ ಬೂತ್ ಮಟ್ಟದ ಕಾರ್ಯ ಕರ್ತರ ಸಮಿತಿಗಳ ರಚನೆ ಕಾರ್ಯ ಕೊನೆ ಹಂತ ತಲುಪಿದ್ದು, ಆಗಸ್ಟ್ ಅಂತ್ಯಕ್ಕೆ ಎಲ್ಲ ಬೂತ್ ಮಟ್ಟದ ಕಾರ್ಯಕರ್ತರ ಸಮಿತಿ ರಚನೆ ಪೂರ್ಣಗೊಳ್ಳಲಿದೆ. ಪ್ರತಿ ಬೂತ್‌ಗೂ 10ರಿಂದ 15 ಜನ ಸದಸ್ಯರನ್ನು ನೇಮಿಸಿ, ಒಬ್ಬ ಕಾರ್ಯ ಕರ್ತ ಒಂದು ಬೂತ್‌ನಲ್ಲಿ ಸುಮಾರು 15ರಿಂದ 20 ಮನೆಗಳಿಗೆ ಭೇಟಿ ನೀಡುವುದು. 2018ರ ಚುನಾವಣೆವರೆಗೂ ತಮಗೆ ನಿಗದಿಗೊಳಿಸಿರುವ ಮನೆಗಳ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
– ರಾಜ್ಯ ಸರಕಾರ ಕಳೆದ 4 ವರ್ಷದಲ್ಲಿ ಜಾರಿಗೆ ತಂದಿರುವ ಮಹತ್ವದ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಜಲ ಸಿರಿ, ವನ ಸಿರಿ, ನಲಿ ಕಲಿ, ವಿದ್ಯಾ ಸಿರಿ, ಕಾರ್ಮಿಕರ ಕಲ್ಯಾಣ, ವಸತಿ ಭಾಗ್ಯ, ಯುವ ಸಬಲೀಕರಣ, ನಿರಂತರ ಜ್ಯೋತಿ, ಮೆಟ್ರೊ, ಇಂದಿರಾ ಕ್ಯಾಂಟೀನ್ ಸಹಿತ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪು ವಂತೆ ಮಾಡುವುದರ ಜತೆಗೆ ಕೇಂದ್ರದ ಎನ್‌ಡಿಎ ಸರಕಾರದ ವೈಫಲ್ಯಗಳ ಬಗ್ಗೆಯೂ ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಚುನಾವಣೆ ವರೆಗೂ ನಿರಂತರವಾಗಿ ಮುಂದುವರಿಸುವುದು.
– ರಾಜ್ಯದಲ್ಲಿ ಹಿಂದಿನ ಚುನಾವಣೆ ಸಂದರ್ಭದಲ್ಲಿ ವಿಶಿಷ್ಟ ಘೋಷ ವಾಕ್ಯಗಳಾದ ಕೃಷ್ಣೆಯ ಕಡೆಗೆ ಕಾಂಗ್ರೆಸ್ ನಡಿಗೆ, ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ, ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಎಂಬ ಸ್ಲೋಗನ್‌ಗಳನ್ನೇ ಬಳಸಿಕೊಂಡು ಜನರನ್ನು ಕಾಂಗ್ರೆಸ್ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಪರಮೇಶ್ವರ್ ಈ ಚುನಾವಣೆಗೂ ಅದೇ ಮಂತ್ರ ಪಠಿಸುತ್ತಿದ್ದು, ಮನೆ ಮನೆಗೆ ಕಾಂಗ್ರೆಸ್, ಕಾಂಗ್ರೆಸ್ ನಡಿಗೆ ಮರಳಿ ಜನರ ಬಳಿಗೆ, ಮಾಸ್ ಬೇಸ್‌ನಿಂದ ಕೇಡರ್ ಬೇಸ್ ಕಾಂಗ್ರೆಸ್ ಕಡೆಗೆ ಎಂಬ ಸ್ಲೋಗನ್‌ಗಳನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಈಗಿನಿಂದಲೇ ಕಾರ್ಯರೂಪಕ್ಕಿಳಿದಿದ್ದಾರೆ.
ಪರಂ ನಡಿಗೆ ಬೂತ್ ಕಡೆಗೆ
ಮಹತ್ವಾಕಾಂಕ್ಷಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದಾರೆ.
ಸೆಪ್ಟಂಬರ್ ಮೊದಲ ವಾರದಲ್ಲಿ ಯೋಜನೆಗೆ ಸಿಎಂ ಸಿದ್ದರಾಮ್ಯಯ ನೇತೃತ್ವದಲ್ಲಿ ಅಧಿಕೃತ ಚಾಲನೆ ನೀಡಿ, ಅನಂತರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಬೂತ್ ಮಟ್ಟದ ಸಮಿತಿ ಸದಸ್ಯರ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.