ದುಬಾೖ: ಪ್ರಧಾನಿ ನರೇಂದ್ರ ಮೋದಿಯವರು 2024ರ ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಉದ್ಘಾಟಿಸಿದ ಬಿ.ಎ.ಪಿ.ಎಸ್. ನೂತನ ಹಿಂದೂ ಮಂದಿರದಲ್ಲಿ ದೀಪಾವಳಿ ಹಬ್ಬವನ್ನು ನವೆಂಬರ್ ಒಂದರಂದು ವಿಜೃಂಬಣೆಯಿಂದ ಆಚರಿಸಲಾಯಿತು. ಮರುಭೂಮಿಯಲ್ಲಿ ಅರಳಿರುವ ತಾವರೆಯಂತಿರುವ ಭವ್ಯ ಹಿಂದೂ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ದೇವತಾ ವಿಗ್ರಹಗಳಿಗೆ ವಿವಿಧ ನೈವೇದ್ಯಗಳನ್ನು ತಾವರೆ ಹೂವಿನ ಕಲಾಕೃತಿಯನ್ನು ನಿರ್ಮಿಸಿ ಅದರ ಮೇಲಿಟ್ಟು ಅರ್ಪಿಸಲಾಯಿತು.
ಭಗವಾನ್ ಶ್ರೀ ಕೃಷ್ಣ ರಾಧೆಯರ ವಿಗ್ರಹದ ಎದುರು ನವಿಲಿನ ಆಕೃತಿಯನ್ನು ನಿರ್ಮಿಸಿ ಹರಡಿರುವ ನವಿಲು ಗರಿಗಳ ಮೇಲೆ ನೈವೇದ್ಯಗಳನ್ನಿಟ್ಟು ಸಮರ್ಪಿಸಲಾಗಿತ್ತು. ಭಗವಾನ್ ಜಗನ್ನಾಥ ವಿಗ್ರಹದ ಮುಂಭಾಗದಲ್ಲಿ ಪುರಿ ಜಗನ್ನಾಥ ರಥದ ಚಕ್ರದ ಆಕೃತಿಯನ್ನು ನಿರ್ಮಿಸಿ ಎಳೆಯಲು ಉಪಯೋಗಿಸುವ ಹಗ್ಗದ ಮಾದರಿಗಳನ್ನು ನಿರ್ಮಿಸಿ ಅದರ ಮೇಲೆ ನೈವೇದ್ಯ ಸಮರ್ಪಣೆ ಮಾಡಲಾಗಿತ್ತು. ತಿರುಪತಿ ಬಾಲಾಜಿ ಮತ್ತು ಪದ್ಮಾವತಿ ವಿಗ್ರಹದ ಹಿಂಬದಿ ಮತ್ತು ಎದುರು ಬದಿಯಲ್ಲಿ ಬಾಳೆ ಎಲೆಯಲ್ಲಿ ಅಲಂಕಾರ ಮಾಡಿ ನೈವೇದ್ಯ ಇರಿಸಲಾಗಿತು. ಸ್ವಾಮಿ ಅಯಪ್ಪ ವಿಗ್ರಹದ ಮುಂದೆ ಹದಿನೆಂಟು ಚಿನ್ನದ ಮೆಟ್ಟಿಲಿನ ಆಕೃತಿ ನಿರ್ಮಿಸಿ ಅದರ ಮೇಲೆ ಕೇರಳ ಶೈಲಿಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯಕ್ಕಾಗಿ ಇಡಲಾಗಿತ್ತು.
ಭಗವಾನ್ ಶಿವ ಪಾರ್ವತಿ ವಿಗ್ರಹದ ಸುತ್ತ ಕೈಲಾಸ ಪರ್ವತ, ಪಕ್ಕದಲ್ಲಿ ಮಾನಸ ಸರೋವರದ ಆಕೃತಿಯನ್ನು ನಿರ್ಮಿಸಲಾಗಿತ್ತು. ಶಿವನ ಕೈಯಲ್ಲಿರುವ ಡಮರುಗದ ಅಕೃತಿಗಳನ್ನು ನಿರ್ಮಿಸಿ ಅದರ ಮೇಲೆ ನೈವೇದ್ಯಗಳನ್ನು ಇರಿಸಲಾಗಿತ್ತು. ಭಗವಾನ್ ಶ್ರೀರಾಮಚಂದ್ರ, ಮಾತೆ ಸೀತಾ ದೇವಿ, ಲಕ್ಷ್ಮಣ ಹನುಮಂತನ ವಿಗ್ರಹ ಪೀಠದ ಮುಂಭಾಗದಲ್ಲಿ ರಾಮೇಶ್ವರದ ಕಡಲ ತೀರದ, ರಾಮ ಸೇತುವೆಯ ಬಂಡೆಗಳ ಪ್ರತಿಕೃತಿಯನ್ನು ನಿರ್ಮಿಸಿ ಅದರ ಮೇಲೆ ನೈವೇದ್ಯಗಳನ್ನು ಇಟ್ಟು ಸಮರ್ಪಣೆ ಮಾಡಲಾಗಿತ್ತು. ನೈವೇದ್ಯಗಳನ್ನು ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ಅರ್ಪಿಸಿದರು.
ನೈವೇದ್ಯಗಳ ಪೈಕಿ ಅಕ್ಕಿ ಬೇಳೆಯಲ್ಲಿ ನೂರಾರು ಬಗೆಯ, ರುಚಿಯ ನೈವೇದ್ಯಗಳು, ಸಿಹಿಯಲ್ಲಿರುವ ಬಗೆ ಬಗೆಯ ತಿಂಡಿಗಳು ಪರಮಾನ್ನಗಳನ್ನು ವಿವಿಧ ಅಳತೆಯ ಮಣ್ಣಿನ ಕುಂಭಗಳಲ್ಲಿ ಇರಿಸಿ ಸಮರ್ಪಿಸಲಾಗಿತ್ತು.
ಅದೇ ರೀತಿ ವಿವಿಧ ರೀತಿಯ ಕೇಕ್‌ಗಳನ್ನು ಅರಬ್ ವಾಸ್ತು ಶೈಲಿಯ ದುಬಾಯಿಯ ಬುರ್ಜ್ ಅಲ್ ಅರಬ್, ಕ್ಲಾಕ್ ಟವರ್, ಅಲ್ ದಾರ್ ಕಾಯಿನ್ ಬಿಲ್ಡಿಂಗ್, ಅಬುಧಾಬಿಯ ಹಿಂದೂ ಮಂದಿರದ ಪ್ರತಿಕೃತಿಗಳು ಕೇಕ್ ರೂಪದಲ್ಲಿ ತಯಾರಿಸಲಾಗಿತ್ತು. ಸಸ್ಯಹಾರಿ ಅರೆಬಿಕ್ ತಿಂಡಿ ತಿನಿಸುಗಳನ್ನು ತಯಾರಿಸಿ ಸಮರ್ಪಿಸಲಾಗಿತ್ತು.
ಅಬುಧಾಬಿ ಹಿಂದೂ ಮಂದಿರದಲ್ಲಿ ಆಚರಿಸಿದ ದೀಪಾವಳಿ ಮತ್ತು ಅನ್ ಕುಟ್ಟ್ ಸಂಭ್ರಮದಲ್ಲಿ ಸರ್ವಧರ್ಮಿಯರು ಸಹ ಭಾಗವಹಿಸಿದ್ದರು.
ದೀಪಾವಳಿ ಹಬ್ಬದ ದಿನದಂದು 36 ಸಾವಿರಕ್ಕೂ ಹೆಚ್ಚು ಮಂದಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಮಂದಿರಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದಿದರು. ಅರಬ್ ಸಂಯುಕ್ತ ಸಂಸ್ಥಾನದ ಕಮ್ಯೂನಿಟಿ ಅಫೈರ್ಸ್, ಸರಕಾರಿ ಅಧಿಕಾರಿಗಳು, ಪೋಲಿಸ್ ಇಲಾಖೆ, ಟ್ರಾಫಿಕ್, ರೋಡ್ ಟ್ರಾನ್ಸ್ ಪೋರ್ಟ್ ಇಲಾಖೆ, ಸೆಕ್ಯೂರಿಟಿಗಳು ಸಹಕಾರ ನೀಡಿ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಅರಬ್ ಸಂಯುಕ್ತ ಸಂಸ್ಥಾದಲ್ಲಿ ನೆಲೆಸಿರುವ ಸನಾತನ ಧರ್ಮಿಯರ ಹಿಂದೂ ಮಂದಿರದ ಕನಸು ನನಸಾಗಿದ್ದು ಪ್ರಥಮ ವರ್ಷದಲ್ಲಿ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸೌಭಾಗ್ಯವನ್ನು ಆಡಳಿತ ಮಂಡಳಿ ಅವಕಾಶವನ್ನು ಕಲ್ಪಿಸಿರುವುದು ಸಾರ್ವಕಾಲಿಕ ಮಾನ್ಯವಾಗಿದೆ.
*ಬಿ. ಕೆ. ಗಣೇಶ್ ರೈ ದುಬಾೖ