ಮುಂಬೈ: ಮುಂಬೈ ಇಂಡಿಯನ್ಸ್‌ಗೆ ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಸಲ ಸೋಲಿನ ಬಿಸಿ ಮುಟ್ಟಿದೆ. ಹರ್ಮನ್‌ಪ್ರೀತ್ ಕೌರ್ ಪಡೆಯನ್ನು ಕೆಡವಿದ ತಂಡ ಯುಪಿ ವಾರಿಯರ್. ಶನಿವಾರದ ಮೊದಲ ಮುಖಾಮುಖೀಯಲ್ಲಿ ಯುಪಿ 5 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಸರಿಯಾಗಿ 20 ಓವರ್‌ಗಳಲ್ಲಿ 127ಕ್ಕೆ ಆಲೌಟ್ ಆಯಿತು. ಆರಂಭಿಕ ಆಟಗಾರ್ತಿ ಮ್ಯಾಥ್ಯೂಸ್ 35, ಇಸ್ಸಿ ವಾಂಗ್ 32 ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು 25 ರನ್ ಗಳಿಸಿದರು. ಈ ಮೂವರನ್ನು ಬಿಟ್ಟರೆ ಬೇರಾವ ಬ್ಯಾಟಿಗರು ಎರಡಂಕಿ ದಾಟಲಿಲ್ಲ. ಹೀಗಾಗಿ ಮುಂಬೈ ಅಳೆದು ತೂಗಿ ಎಲ್ಲ ವಿಕೆಟ್ ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು. ಯುಪಿ ಪರ ಸೋಫಿ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್ ಪಡೆದು ಮಿಂಚಿದರು.
ಈ ಗುರಿಯನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 129 ರನ್ ಬಾರಿಸಿತು. ಹಾಗಂತ ಯುಪಿ ವಾರಿಯರ್ಸ್ ಆರಂಭ ಕೂಡ ಚೆನ್ನಾಗಿರಲಿಲ್ಲ. ಕೇವಲ 1 ರನ್‌ಗೆ ಮೊದ ಲನೇ ವಿಕೆಟ್, 21 ರನ್‌ಗೆ 2ನೇ ವಿಕೆಟ್ ಹೋಯಿತು. ಆದರೂ ಗ್ರೇಸ್ ಹ್ಯಾರೀಸ್ ಮತ್ತು ಮೆಕ್ ಗ್ರಾತ್ ಕ್ರಮ ವಾಗಿ 39 ಮತ್ತು 38 ರನ್ ಗಳಿಸಿ ಗೆಲುವಿನಲ್ಲಿ ನೆರವಾದರು. ಆ್ಯಮೆಲಿಯಾ ಕೇರ್ 2 ವಿಕೆಟ್ ಗಳಿಸಿದರು.
ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಮುಂಬೈಯನ್ನು ಮೊದಲ ಸಲ ಆಲೌಟ್ ಮಾಡಿದ ಹಾಗೂ ಮುಂಬೈಯನ್ನು ಮೊದಲ ಸಲ ಸೋಲಿಸಿದ ಹಿರಿಮೆ ಯುಪಿ ತಂಡದ್ದಾಯಿತು. ಇದು 6 ಪಂದ್ಯಗಳಲ್ಲಿ ಯುಪಿ ಸಾಧಿಸಿದ 3ನೇ ಜಯ. 6 ಅಂಕ ಹೊಂದಿರುವ ಅಲಿಸ್ಸಾ ಹೀಲಿ ಬಳಗವೀಗ 3ನೇ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಸಂಕ್ಷಿಪ್ತ ಸ್ಕೋರ್
ಮುಂಬೈ – 127/10. 20 ಓವರ್. ಮ್ಯಾಥ್ಯೂಸ್ 35, ಇಸ್ಸಿ ವಾಂಗ್ 32, ಹರ್ಮನ್ ಕೌರ್ 25, ಸೋಫಿ 15/3.
ಯುಪಿ ವಾರಿಯರ್ಸ್ – 129/5. 19.3 ಓವರ್. ಗ್ರೇಸ್ ಹ್ಯಾರೀಸ್ 39, ಮೆಕ್ ಗ್ರಾತ್ 38.