Advertisement

ಹೊಸ ವರ್ಷದ ಮೊದಲ ದಿನ 32 ಜನನ  

12:49 PM Jan 02, 2018 | |

ಮಂಗಳೂರು: ಹೊಸ ವರ್ಷ ಬದುಕಿನಲ್ಲಿ ಹೊಸ ಹರುಷ ಹಾಗೂ ಹೊಸ ಖುಷಿಯ ವಿಚಾರಗಳನ್ನು ತರಬೇಕು ಎನ್ನುವುದು ಎಲ್ಲರ ಮಹದಾಸೆ. ಇಂಥ ಸಂಭ್ರಮದ ಹೊಸ ವರ್ಷ ಉದಯಿಸುವ ಗಳಿಗೆಯಲ್ಲಿ ಸಂಸಾರದಲ್ಲಿ ಹೊಸ ಅತಿಥಿಯ ಆಗಮನವಾದರೆ ಆ ಕುಟುಂಬಕ್ಕೆ ಅದೆಷ್ಟು ಸಂತೋಷವಾಗಬಹುದು!

Advertisement

ಹೌದು, ಎಲ್ಲರೂ ಪಟಾಕಿ ಸಿಡಿಸಿ ನರ್ತಿಸುತ್ತ 2018ನೇ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದರೆ, ಅದೆಷ್ಟೊ ಕುಟುಂಬಗಳಲ್ಲಿ ಆ ಗಳಿಗೆಯಲ್ಲಿ ಮುದ್ದು ಕಂದಮ್ಮ ಗಳ ಜನನವಾಗಿದೆ. ದ.ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನ 32ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ.  ನಗರದ ಸರಕಾರಿ ಲೇಡಿಗೋಶನ್‌, ಅತ್ತಾವರ ಕೆಎಂಸಿ, ಕುಂಟಿಕಾನದ ಎ.ಜೆ., ಕಂಕನಾಡಿಯ ಫಾದರ್‌
ಮುಲ್ಲರ್‌, ದೇರಳಕಟ್ಟೆಯ ಜ| ಕೆ.ಎಸ್‌. ಹೆಗ್ಡೆ, ಗಾಂಧಿ ನಗರದ ಭಟ್‌ ನರ್ಸಿಂಗ್‌ ಹೋಂ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ (ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಸಂಜೆ 4 ಗಂಟೆ ವರೆಗೆ) ಹುಟ್ಟಿದ ಮಕ್ಕಳ ವಿವರವು “ಉದಯವಾಣಿ’ಗೆ ದೊರಕಿದೆ. ಈ ಕಂದಮ್ಮಗಳ ಪೈಕಿ ಹೆಣ್ಣುಮಕ್ಕಳೇ ಹೆಚ್ಚು ಇರುವುದು ವಿಶೇಷ. 

ಸರಕಾರಿ ಆಸ್ಪತ್ರೆಯಲ್ಲಿ 6 ಮಕ್ಕಳು
ಲೇಡಿಗೋಶನ್‌ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಒಟ್ಟು ಆರು ಮಕ್ಕಳು ಜನಿಸಿದ್ದಾರೆ. ಈ ಪೈಕಿ ಐವರು ಸಿಸೇರಿಯನ್‌ ಮೂಲಕ, ಒಂದು ಮಾತ್ರ ಸಹಜ ಹೆರಿಗೆ. ಇವರ ಪೈಕಿ ನಾಲ್ಕು ಹೆಣ್ಣು, ಎರಡು ಗಂಡು. ಈ ಮಕ್ಕಳೆಲ್ಲ ಕ್ರಮವಾಗಿ ಸೋಮವಾರ ಪ್ರಾತಃಕಾಲ 5.38, 6.31, 6.40, ಬೆಳಗ್ಗೆ 10.02, 10.11 ಮತ್ತು 10.38ಕ್ಕೆ ಹುಟ್ಟಿದ್ದಾರೆ. ಎಲ್ಲ ನವಜಾತ ಶಿಶುಗಳು ಆರೋಗ್ಯವಾಗಿವೆ ಎಂದು ಆಸ್ಪತ್ರೆ ಸಿಬಂದಿ ತಿಳಿಸಿದ್ದಾರೆ. ಹೊಸ ವರ್ಷದಂದೇ ತಮಗೆ ಹೆಣ್ಣುಮಗು ಜನಿಸಿದ್ದಕ್ಕೆ ತುಂಬಾ ಖುಷಿಗೊಂಡಿರುವ ಅನಿಲ್‌, “ಮಗು ಜನಿಸುವ ಅಂದಾಜು ದಿನಾಂಕ ಜನವರಿ ಆಸುಪಾಸಿನಲ್ಲೇ ಇತ್ತಾದರೂ ಜನವರಿ ಒಂದರಂದೇ ಹೆರಿಗೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಹೊಸ ವರ್ಷದ ಮೊದಲ ದಿನವೇ ಹೆಣ್ಣುಮಗು ಹುಟ್ಟಿದ್ದು ಬಹಳಷ್ಟು ಖುಷಿ ಕೊಟ್ಟಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಹೊಷ ವರ್ಷದಂದು 21 ಹೆಣ್ಣುಮಕ್ಕಳು
ನಗರದ ವಿವಿಧ ಆಸ್ಪತ್ರೆಗಳಿಂದ ಲಭ್ಯವಾದ ಮಾಹಿತಿಯಂತೆ ಹೊಸ ವರ್ಷದಲ್ಲಿ ಜಿಲ್ಲೆಯಲ್ಲಿ ಜನಿಸಿರುವ ಮಕ್ಕಳ ಪೈಕಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕ. ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಸಂಜೆ 4 ಗಂಟೆಯವರೆಗೆ ಜನ್ಮ ತಳೆದ 32 ಮಕ್ಕಳ ಪೈಕಿ 21 ಹೆಣ್ಣುಮಕ್ಕಳು. ಉಳಿದ 11 ಗಂಡು. ಇದಲ್ಲದೆ, ಮಂಗಳೂರು ಹೊರವಲಯದ ಮೂಡಬಿದಿರೆಯ ಜಿ.ವಿ. ಪೈ ಆಸ್ಪತ್ರೆಯಲ್ಲಿ ಧರ್ಮವೀರ ಮತ್ತು ಡಾ| ರಮ್ಯಾ ದಂಪತಿಗೆ ಮಧ್ಯರಾತ್ರಿ 12.52ಕ್ಕೆ ಹೆಣ್ಣುಮಗು ಜನಿಸಿದ್ದು, ಹೊಸ ವರ್ಷದಂದು ಮಗು ಜನಿಸಿದ್ದಕ್ಕೆ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ 21 ಜನನ
ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ 10 ಮಕ್ಕಳು ಜನಿಸಿದ್ದಾರೆ. ಉಡುಪಿ - 5, ಕುಂದಾಪುರ-4, ಕಾರ್ಕಳ-1 ಜನನ ವಾಗಿದೆ. ಇವರಲ್ಲಿ 5 ಗಂಡು ಮತ್ತು 5 ಹೆಣ್ಣು. ಮಣಿ ಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಒಟ್ಟು 7, ಉಡುಪಿ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ 4 ಮಕ್ಕಳು ಜನಿಸಿ ದ್ದಾರೆ. ಮಣಿಪಾಲದಲ್ಲಿ ಜನಿಸಿದ ಮಕ್ಕಳಲ್ಲಿ 3 ಗಂಡು, 4 ಹೆಣ್ಣು; ಉಡುಪಿಯಲ್ಲಿ 2 ಗಂಡು, 2 ಹೆಣ್ಣು.

Advertisement

ಹೊಸ ವರ್ಷದ ಉಡುಗೊರೆ
“ನನ್ನ ಪತ್ನಿಗೆ ಜನವರಿ ಒಂದರಂದೇ ಹೆರಿಗೆ ದಿನಾಂಕ ನೀಡಲಾಗಿತ್ತು. ನಿರೀಕ್ಷೆಯಂತೆಯೇ ಹೊಸ ವರ್ಷದ ಮೊದಲ ದಿನ ಮನೆಗೆ ಭಾಗ್ಯಲಕ್ಷ್ಮಿಯ ಆಗಮನವಾಗಿದೆ. ಈ ಮಗು ನಮಗೆ ಹೊಸ ವರ್ಷದ ಉಡುಗೊರೆ. ತುಂಬಾ ಖುಷಿಯಾಗುತ್ತಿದೆ.’
ಧರ್ಮವೀರ ಮತ್ತು ರಮ್ಯಾ ಮೂಡಬಿದಿರೆ

ಖಾಸಗಿ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳು ಕುಂಟಿಕಾನದ ಎ.ಜೆ. ಆಸ್ಪತ್ರೆ ಒಟ್ಟು ಜನನ: 5 ಸಮಯ: ಬೆಳಗ್ಗೆ 6.11, 7.05, 
     7.55, 8.07, 10.10
ಪ್ರಸೂತಿ ವಿಧ: 1 ಸಹಜ, 4 ಸಿಸೇರಿಯನ್‌
ಮಕ್ಕಳು: 2 ಗಂಡು, 3 ಹೆಣ್ಣು
ದೇರಳಕಟ್ಟೆ ಜ| ಕೆ.ಎಸ್‌. ಹೆಗ್ಡೆ ಆಸ್ಪತ್ರೆ
ಒಟ್ಟು ಜನನ: 4
ಸಮಯ: ರವಿವಾರ ತಡರಾತ್ರಿ 12.02, 1.58, ಮುಂಜಾನೆ 4, ಅಪರಾಹ್ನ 2.05
ಪ್ರಸೂತಿ ವಿಧ: 2 ಸಹಜ, 2 ಸಿಸೇರಿಯನ್‌
ಮಕ್ಕಳು: 3 ಗಂಡು, 1 ಹೆಣ್ಣು 
ಅತ್ತಾವರ ಕೆಎಂಸಿ
ಒಟ್ಟು ಜನನ: 4
ಪ್ರಸೂತಿ ವಿಧ: 1 ಸಹಜ, 3 ಸಿಸೇರಿಯನ್‌
ಮಕ್ಕಳು: ಎಲ್ಲವೂ ಹೆಣ್ಣು
ಕಂಕನಾಡಿ ಫಾದರ್‌ ಮುಲ್ಲರ್ ಆಸ್ಪತ್ರೆ
ಒಟ್ಟು ಜನನ: 8
ಪ್ರಸೂತಿ ವಿಧ: 5 ಸಹಜ. 3 ಸಿಸೇರಿಯನ್‌
ಮಕ್ಕಳು: 3 ಗಂಡು, 5 ಹೆಣ್ಣು
ಭಟ್‌ ನರ್ಸಿಂಗ್‌ ಹೋಂ, ಗಾಂಧಿ ನಗರ
ಒಟ್ಟು ಜನನ: 4
ಸಮಯ: ರವಿವಾರ ಮಧ್ಯರಾತ್ರಿ 12.04, ಸೋಮವಾರ ಮಧ್ಯಾಹ್ನ 1, 2, 3.15
ಪ್ರಸೂತಿ ವಿಧ: 3 ಸಹಜ, 1 ಸಿಸೇರಿಯನ್‌ 
ಮಕ್ಕಳು: 3 ಗಂಡು, 1 ಹೆಣ್ಣು

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next