ರಾಮನಗರ: ಸರ್ಕಾರದ ಸೂಚನೆಯಂತೆ ಮಂಗಳವಾರ ಪದವಿ ಕಾಲೇಜುಗಳ ಬಾಗಿಲು ತೆರೆದವಾದರೂ, ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡಲಿಲ್ಲ. ಉಪನ್ಯಾಸಕರು ಕಾಲೇಜಿಗೆ ಬಂದರಾದರೂ, ಕೋವಿಡ್ ಸೋಂಕು ಪರೀಕ್ಷೆಗೆ ತೆರಳಿದರು. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಫೋನಾಯಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದೆಲ್ಲಿ ಎಂದು ತಮ್ಮ ಉಪನ್ಯಾಸಕರ ಸಲಹೆ ಪಡೆದುಕೊಂಡಿದ್ದಾರೆ.
ಕೋವಿಡ್- 19 ಸೋಂಕು ಕಾರಣ ಸುದೀರ್ಘ ರಜೆಯ ನಂತರ ಸರ್ಕಾರದ ಸೂಚನೆಯಂತೆ ಮಂಗಳವಾರ ಜಿಲ್ಲಾದ್ಯಂತ ಅಂತಿಮ ಪದವಿ ವಿದ್ಯಾ ರ್ಥಿಗಳಿಗಾಗಿ ಕಾಲೇಜು ಪುನಾರಂಭವಾಗಿವೆ. ದೀಪಾವಳಿ ಹಬ್ಬದ ಮೂಡ್‌ನಲ್ಲಿದ್ದ ಕಾರಣವೋ, ಕೋವಿಡ್ ಸೋಂಕು ಆತಂಕ ಕಾರಣವೋ, ಮಂಗಳವಾರ ಅಂತಲೋ ಮೊದಲ ದಿನವಿದ್ಯಾರ್ಥಿಗಳು ಕಾಲೇಜಿನ ಕಡೆ ಹೆಜ್ಜೆ ಹಾಕಲಿಲ್ಲ.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ 15 ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರಾದರು,ಕೋವಿಡ್ ಸೋಂಕು ಪರೀಕ್ಷೆಯ ವರದಿ ಇಲ್ಲದ ಕಾರಣ ತರಗತಿಗಳನ್ನು ನಡೆಸಲಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯತೆ ಮತ್ತು ಪೋಷಕರಿಂದ ತರಬೇಕಾದ ಅನುಮತಿ ಪತ್ರದ ನಮೂನೆ ಪಡೆದು ವಿದ್ಯಾರ್ಥಿಗಳು ಮನೆಕಡೆಗೆ ಹೆಜ್ಜೆ ಹಾಕಿದರು.
ಉಪನ್ಯಾಸಕರಿಗೆ ಕೋವಿಡ್ ಪರೀಕ್ಷೆ: ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 37 ಉಪನ್ಯಾಸಕರಿಗೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಕೋವಿಡ್ ಸೋಂಕು ಪತ್ತೆಗಾಗಿ ಗಂಡಲು ಮತ್ತು ಮೂಗಿದ ದ್ರವ ಮಾದರಿಯನ್ನು ಪಡೆದುಕೊಂಡಿದ್ದಾರೆ.ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಅಂತಿಮ ತರಗತಿಗಳಲ್ಲಿ ಒಟ್ಟು 500 ಮಂದಿ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿರುವುದಾಗಿ ಉಪನ್ಯಾಸಕರು ತಿಳಿಸಿದ್ದಾರೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಪರೀಕ್ಷೆ ಎಲ್ಲಿ, ಹೇಗೆ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲ. ಹೀಗಾಗಿ ತಾವು ಆರೋಗ್ಯ ಇಲಾಖೆಗೆ ಪತ್ರ ಬರೆದು ತಕ್ಷಣದಲ್ಲೆ ಒಂದು ದಿನ ನಿಗದಿ ಮಾಡಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳಿಗೆ ಸೋಂಕು ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
–ವೀರೇಶ್, ಪ್ರಾಂಶುಪಾಲ, ಪದವಿ ಕಾಲೇಜು, ಭಾರತೀಯ ಸಂಸ್ಕೃತಿ ವಿದ್ಯಾಪೀಠ.
ಸರ್ಕಾರದ ನಿಯಮಾನ್ವಯಕೋವಿಡ್ ಪರೀಕ್ಷೆ ಮಾಡಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರವೇಶಕಲ್ಪಿಸಲಾಗುವುದು. ಪೋಷಕರಿಂದ ಅನುಮತಿಪತ್ರ ತರುವುದುಕಡ್ಡಾಯ. ವಿದ್ಯಾರ್ಥಿಗಳು ಬಂದ ನಂತರ ಪಾಠ ಪ್ರವಚನ ಆರಂಭವಾಗಲಿದೆ. ಆನ್‌ಲೈನ್ ತರಗತಿಗಳು ಚಾಲನೆಯಲ್ಲಿರುತ್ತವೆ.
–ಕಿಶೋರ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು.