ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ “ಫ್ಯಾನ್’ ಚಿತ್ರ ಇದೇ ಆಗಸ್ಟ್ 23ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸದ್ಯ ಚಿತ್ರತಂಡ ಚಿತ್ರದ ಟೀಸರ್ ಮತ್ತು ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿ ಭರದಿಂದ ತನ್ನ ಪ್ರಮೋಶನ್ ಕೆಲಸಗಳನ್ನು ನಡೆಸುತ್ತಿದೆ. ಇನ್ನು ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಶಂಕರ್ ನಾಗ್ ಅವರಿಗೆ ಸಂಬಂಧಿಸಿದ ವಿಷಯವೊಂದನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ.
ಹಾಗಾಗಿಯೇ ಶಂಕರ್‌ನಾಗ್ ಹುಟ್ಟಿ, ಬೆಳೆದ ಊರಿನಲ್ಲೇ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎನ್ನುತ್ತದೆ ಚಿತ್ರತಂಡ. ಅಲ್ಲದೆ ಶಂಕರ್ ನಾಗ್ ಅವರ ಸ್ಮರಣಾರ್ಥ ಚಿತ್ರದ ಬಿಡುಗಡೆಯ ದಿನದಂದು ಶಂಕರ್‌ನಾಗ್ ಅವರ ಹಾರ್ಡ್‌ಕೋರ್ ಫ್ಯಾನ್ಸ್ ಆಗಿರುವ ಆಟೋ ಚಾಲಕರಿಗಾಗಿ, ಗಾಂಧಿನಗರದ ಕೆ.ಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರದಲ್ಲಿ “ಫ್ಯಾನ್’ ಚಿತ್ರದ ಉಚಿತ ಪ್ರದರ್ಶವನ್ನೂ ಚಿತ್ರತಂಡ ಘೋಷಿಸಿದೆ.
“ಫ್ಯಾನ್’ ಚಿತ್ರದ ಬಿಡುಗಡೆಯ ಮೊದಲ ದಿನದ ಮೊದಲ ಪ್ರದರ್ಶನವನ್ನು ಆಟೋ ಚಾಲಕರಿಗಾಗಿ ಉಚಿತವಾಗಿ ಆಯೋಜಿಸಲಾಗಿದ್ದು, ಆಟೋ ಚಾಲಕರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಉಚಿತವಾಗಿ ಟಿಕೆಟ್ ಪಡೆದು ಚಿತ್ರವನ್ನು ನೋಡಬಹುದು ಎಂದಿದೆ ಚಿತ್ರತಂಡ. ಒಟ್ಟಾರೆ ತನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಬಿಡುಗಡೆಗೂ ಮೊದಲೇ ಒಂದಷ್ಟು ಸೌಂಡ್ ಮಾಡುತ್ತಿರುವ “ಫ್ಯಾನ್’ ಕನ್ನಡದ ಸಿನಿಮಾ “ಫ್ಯಾನ್ಸ್’ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.
ಈ ಚಿತ್ರವನವ್ನು ದರ್ಶಿತ್ ಭಟ್ ನಿರ್ದೇಶಿಸಿದ್ದಾರೆ. ಸವಿತಾ ಈಶ್ವರ್ ನಿರ್ಮಾಣ ಮಾಡಿದ್ದಾರೆ. ಇನ್ನು “ಫ್ಯಾನ್’ ಚಿತ್ರದಲ್ಲಿ ನವನಟ ಆರ್ಯನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದು ಜನಪ್ರಿಯ ಸೀರಿಯಲ್ ಒಂದರಲ್ಲಿ ಅಭಿನಯಿಸುತ್ತಿರುವ ಹೀರೋ ಪಾತ್ರವಂತೆ. ಇನ್ನು ಚಿತ್ರದ ಒಬ್ಬ ನಾಯಕಿ ಅದ್ವಿತಿ ಶೆಟ್ಟಿ ಉತ್ತರ ಕನ್ನಡದ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.