Advertisement

ಮಂಗಳೂರಿನಲ್ಲಿ ಮೊದಲ ಕೊರೊನಾ ಪಾಸಿಟಿವ್‌ ಪತ್ತೆ

10:04 PM Mar 22, 2020 | Lakshmi GovindaRaj |

ಮಂಗಳೂರು: ಇಲ್ಲಿನ ವೆನ್ಲಾಕ್‌ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳ ಮೂಲದ 22 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೊದಲ ಕೊರೊನಾ ಪ್ರಕರಣ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ದುಬೈನಿಂದ ಮಾ.19ರಂದು ಸಂಜೆ 5.45ಕ್ಕೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಮಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿ ಬಂದಿಳಿದಿದ್ದ. ತಪಾಸಣೆ ವೇಳೆ ರೋಗ ಲಕ್ಷಣಗಳಿರುವುದು ಪತ್ತೆಯಾದ್ದರಿಂದ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್‌ ಮುಖಾಂತರ ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.

20ರಂದು ಆತನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಭಾನುವಾರ ವರದಿ ಕೈ ಸೇರಿದೆ. ಕೊರೊನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ರೋಗಿಯನ್ನು ಪ್ರತ್ಯೇಕ ಐಸೋಲೇಶನ್‌ ವಾರ್ಡ್‌ನಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

165 ಮಂದಿಯ ನಿಗಾಕ್ಕೆ ಕ್ರಮ: ಭಟ್ಕಳದ ವ್ಯಕ್ತಿಯೊಂದಿಗೆ ಅಂದು ವಿಮಾನದಲ್ಲಿ ಸಂಚರಿಸಿದ್ದ ಎಲ್ಲ 165 ಮಂದಿಯ ವೈಯಕ್ತಿಕ ಮಾಹಿತಿಗಳನ್ನು ಪಡೆಯಲಾಗಿದ್ದು, ಅವರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಂಧೂ ಬಿ. ರೂಪೇಶ್‌ ವಿವರಿಸಿದರು.

ಯುವಕನಿಗೆ ಸಮಸ್ಯೆಯಾಗದು: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ 104 ಮಂದಿಯ ಗಂಟಲು ಸ್ರಾವವನ್ನು ಇಲ್ಲಿಯವರೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ರವಿವಾರದಂದು 1 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Advertisement

15 ಪರೀಕ್ಷಾ ವರದಿಗಳು ಸ್ವೀಕೃತಿಗೆ ಬಾಕಿ ಇವೆ. ಪಾಸಿಟಿವ್‌ ಪ್ರಕರಣ ಕಂಡು ಬಂದ ಯುವಕ 22 ವರ್ಷದವರನಾಗಿರುವುದರಿಂದ ಅವನಿಗೆ ಯಾವುದೇ ಸಮಸ್ಯೆ ಆಗದೆಂದು ವೈದ್ಯರು ಹೇಳಿದ್ದಾರೆ. ಆತನೊಂದಿಗೆ ಸಹ ಪ್ರಯಾಣಿಕರಾಗಿದ್ದ 165 ಮಂದಿಯನ್ನೂ ನಿಗಾದಲ್ಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಿರುಗಾಡಿದರೆ ಕ್ರಮ: ಸ್ವಯಂ ಪ್ರೇರಿತ ಬಂದ್‌ ಮಾಡುವ ಮೂಲಕ ರವಿವಾರ ಜನ ಉತ್ತಮ ಸ್ಪಂದನೆ ನೀಡಿದ್ದಾರೆ. ಮಾ. 31ರವರೆಗೆ ಜಿಲ್ಲೆಯಲ್ಲಿ ಇದು ಮುಂದುವರಿಯಲಿದ್ದು, ಜನ ಇದೇ ರೀತಿ ಸಹಕರಿಸಬೇಕು. ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ಇರುತ್ತದೆ. ಜನ ಗುಂಪುಗೂಡುವಿಕೆ, ಕಾರ್ಯಕ್ರಮಗಳನ್ನು ಏರ್ಪಡಿಸುವಿಕೆ ಮಾಡಬಾರದು.

ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣ ಮಾಡಬಹುದು. ಶಿಕ್ಷಕರಿಗೆ ರಜೆ ನೀಡಲಾಗುವುದು. ರಸ್ತೆಯಲ್ಲಿ ಅನಗತ್ಯ ತಿರುಗಾಡುವುದು, ವಿದೇಶದಿಂದ ಬಂದವರಿಗೆ ಕೈಗೆ ಹಾಕಿರುವ ಗುರುತನ್ನು ಅಳಿಸಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹವರಿಗೆ ಪೊಲೀಸರ ಮುಖಾಂತರ ಎಚ್ಚರಿಕೆ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮುಂಜಾಗ್ರತೆಯೇ ಮದ್ದು: ಮಂಗಳೂರಿನಲ್ಲಿ ಮೊದಲ ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿರುವುದರಿಂದ ಜನ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ಅವಶ್ಯವಿದ್ದಲ್ಲಿ ಮಾತ್ರ ಹೊರಗಡೆ ತೆರಳುವುದು, ಕಾರ್ಯಕ್ರಮಗಳನ್ನು ಆಯೋಜಿಸದೇ ಇರುವುದು, ಆಗಾಗ ಕೈ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಆದಷ್ಟು ಮನೆಯಲ್ಲೇ ಇದ್ದು, ಕರ್ತವ್ಯ ನಿರ್ವಹಿಸಬೇಕು. ಮಕ್ಕಳು ಮತ್ತು ವಯೋವೃದ್ಧರನ್ನು ಹೊರಗೆ ಹೋಗಲು ಬಿಡದೆ, ಮನೆಯೊಳಗೇ ಇರುವಂತೆ ನೋಡಿಕೊಳ್ಳಬೇಕು ಎಂಬುದು ಉದಯವಾಣಿ’ ಕಳಕಳಿ.

Advertisement

Udayavani is now on Telegram. Click here to join our channel and stay updated with the latest news.

Next