Advertisement

5ರಂದು ಪ್ರಥಮ ಪ್ರಜೆ ಆಯ್ಕೆಗೆ ಮುಹೂರ್ತ

10:22 AM Jan 28, 2022 | Team Udayavani |

ಕಲಬುರಗಿ: ಕಳೆದ ನವೆಂಬರ್‌ 20ರಂದು ನಿಗದಿಯಾಗಿ ಮುಂದೂಡಲ್ಪಟ್ಟ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಬರುವ ಫೆಬ್ರವರಿ 5ರಂದು ಚುನಾವಣೆಗೆ ದಿನಾಂಕ ಅಂತಿಮಗೊಳಿಸಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಫೆ. 5ರಂದು ಬೆಳಗ್ಗೆ 10:30ಗಂಟೆ ಒಳಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದು ತದನಂತರ ಮಧ್ಯಾಹ್ನ 12:30ಕ್ಕೆ ಅಗತ್ಯಬಿದ್ದಲ್ಲಿ ಚುನಾವಣೆಗೆ ಸಮಯ ಹಾಗೂ ದಿನಾಂಕ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ಕಳೆದ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಚುನಾವಣೆ ನಡೆದು ಐದು ತಿಂಗಳ ಬಳಿಕ ಪ್ರಥಮ ಪ್ರಜೆ ಆಯ್ಕೆ ನಡೆಯುತ್ತಿದೆ.

ಮೇಯರ್‌-ಉಪಮೇಯರ್‌ ಚುನಾವಣೆ ಜತೆಗೆ ಸ್ಥಾಯಿ ಸಮಿತಿಗಳ ಚುನಾವಣೆಯೂ ನಡೆಯಲಿದೆ. ಕಳೆದ ಡಿ.10ರಂದು ನಡೆದ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಚುನಾವಣೆಯು ಎಂಎಲ್‌ಸಿ ಚುನಾವಣೆ ಫ‌ಲಿತಾಂಶ ಪ್ರಕಟವಾದ ತಿಂಗಳ ಬಳಿಕ ಈಗ ಚುನಾವಣೆಗೆ ಮುಹೂರ್ತ ನಿಗದಿಪಡಿಸಲಾಗಿದೆ.

ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ರಾಜ್ಯದ ಗಮನ ಸೆಳೆದಿದ್ದವು. ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುವುದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ರಾಷ್ಟ್ರ ನಾಯಕರು ಸಹ ಚರ್ಚೆ ನಡೆಸಿದ್ದರ ಹಿನ್ನೆಲೆಯಲ್ಲಿ ಪ್ರಥಮ ಪ್ರಜೆ ಆಯ್ಕೆ ಕುತೂಹಲ ಕೆರಳಿಸಿತ್ತು.

ಐವರು ಸದಸ್ಯರ ಹೆಸರು ಸೇರ್ಪಡೆ

Advertisement

ಮೇಯರ್‌ ಚುನಾವಣೆಯ ಚಟುವಟಿಕೆಗಳು ಆರಂಭವಾದಾಗಿನಿಂದ ಮತದಾರರ ಪಟ್ಟಿಯಲ್ಲಿ ಯಾರ್ಯಾರು ಸೇರಿದ್ದಾರೆಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಪಾಲಿಕೆಯ 55 ಸದಸ್ಯರ ಜತೆಗೆ ಇಬ್ಬರು ಸಂಸದರು, ಮೂವರು ಶಾಸಕರು, ಮೂವರು ವಿಧಾನಪರಿಷತ್‌ ಸದಸ್ಯರು ಸೇರಿ ಒಟ್ಟು 63 ಸದಸ್ಯ ಬಲಾಬಲದ ಮತದಾರರ ಪಟ್ಟಿ ಹೊಂದಲಾಗಿತ್ತು. ಆದರೆ ಭಾರತೀಯ ಜನತಾ ಪಕ್ಷದ ಏಳು ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರಿಸಲು ಮುಂದಾಗಿ, ಅದರಲ್ಲಿ ಕೊನೆಗೆ ಐವರ ಹೆಸರು ಮತದಾರರ ಪಟ್ಟಿ ಯಲ್ಲಿ ಸೇರ್ಪಡೆಗೊಂಡು ಅಂತಿಮವಾಗಿ 68ಕ್ಕೇರಿದೆ. ಹೀಗಾಗಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು 35 ಸದಸ್ಯ ಬಲಾಬಲಬೇಕು. ಬಿಜೆಪಿಯಲ್ಲಿ 23 ಸದಸ್ಯರು ಗೆದ್ದಿದ್ದು, ಓರ್ವ ಪಕ್ಷೇತರ ಸದಸ್ಯ ಡಾ| ಶಂಭುಲಿಂಗ ಬಳಬಟ್ಟಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ 24ಕ್ಕೆ ಏರಿಕೆಯಾಗಿದೆ. ಇದಲ್ಲದೇ ಇಬ್ಬರು ಶಾಸಕರು, ಮೊದಲಿನ ಮೂವರು ವಿಧಾನ ಪರಿಷತ್‌ ಸದಸ್ಯರು ಹಾಗೂ ಹೊಸದಾಗಿ ಸೇರ್ಪಡೆಯಾದ ಐವರು ವಿಧಾನ ಪರಿಷತ್‌ ಸದಸ್ಯರು ಹಾಗೂ ಓರ್ವ ಸಂಸದ ಸೇರಿದರೆ ಬಿಜೆಪಿ ಬಲಾಬಲ 35ಕ್ಕೆ ಏರಿದಂತಾಗುತ್ತದೆ. 68 ಸದಸ್ಯ ಬಲಾಬಲದಲ್ಲಿ ಬಹುಮತಕ್ಕೆ 35 ಸದಸ್ಯರು ಬೇಕು. ಹೀಗಾಗಿ ಬಿಜೆಪಿ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಜೆಡಿಎಸ್‌ ಬೆಂಬಲವಿಲ್ಲದೇ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಮೀಸಲಾತಿ ಬದಲಾವಣೆಗೆ ಆಕ್ಷೇಪ

ಕಳೆದ ನ. 20ರಂದು ನಿಗದಿಯಾಗಿದ್ದ ಚುನಾವಣೆ ಮುಂದೂಡಲ್ಪಟ್ಟಿದೆ. ಆದರೆ ಮೇಯರ್‌ -ಉಪಮೇಯರ್‌ ಮೀಸಲಾತಿ ಬದಲಾವಣೆ ಆಗುವುದು ಯಾವ ನ್ಯಾಯ ಹಾಗೂ ಅದ್ಹೇಗೆ? ಎಂದು ಪಾಲಿಕೆ ಸದಸ್ಯರು ಪ್ರಶ್ನಿಸುತ್ತಿದ್ದಾರೆ. ಈ ಮೊದಲು ಮೇಯರ್‌ ಸಾಮಾನ್ಯ ಮಹಿಳೆ, ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ “ಬ’ ಕ್ಕೆ ಮೀಸಲಾಗಿತ್ತು. ಆದರೆ ಈಗ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next