ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತ ತಡೆಗಟ್ಟಲು ಮಿಂಟೋ ಕಣ್ಣಿನ ಆಸ್ಪತ್ರೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಪಟಾಕಿಯಿಂದ ಹಾನಿಗೊಳಗಾಗುವ ಗಾಯಾಳುಗಳಿಗೆ 24/7 ತುರ್ತು ಚಿಕಿತ್ಸೆ ನೀಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಿಂಟೋ ಆಸ್ಪತ್ರೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ ಕಣ್ಣುಗಳಿಗೆ ಹಾನಿ ಮಾಡಿಕೊಂಡು ಸಾಕಷ್ಟು ಮಂದಿ ಚಿಕಿತ್ಸೆಗೆ ಬರುತ್ತಾರೆ.
ಹೀಗೆ ಬರುವ ಗಾಯಾಳುಗಳಿಗೆ ತುರ್ತು ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯಲ್ಲಿ ಒಂದು ಪಾಳಿಯಲ್ಲಿ 18 ರಿಂದ 20 ಎಲ್ಲ ಮಂದಿ ವೈದ್ಯ ಹಾಗೂ ವೈದ್ಯೆàತರ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಜತೆಗೆ ಚಿಕಿತ್ಸೆಗೆ ಅಗತ್ಯವಾದ ಔಷಧಿ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದ್ದು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪಟಾಕಿ ಸಿಡಿತದಿಂದ ಕೇವಲ ಕಣ್ಣು ಹಾಗೂ ಚರ್ಮಕ್ಕೆ ಮಾತ್ರವಲ್ಲದೇ ಅದರ ಜೋರು ಶಬ್ದದಿಂದ ಕೆಲವರಿಗೆ ಶ್ರವಣ ಸಮಸ್ಯೆಯೂ ಉಂಟಾಗಲಿದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಅಸ್ತಮಾ ಸಮಸ್ಯೆಯೂ ಉಂಟಾಗುತ್ತದೆ. ಪ್ರಾಣಿ ಪಕ್ಷಿಗಳ ಮೇಲೂ ಇದರ ಪರಿಣಾಮ ಬೀರಲಿದೆ.
ಹಬ್ಬದ ವೇಳೆ ಪಟಾಕಿಯಿಂದ ಕಣ್ಣಿಗೆ ಘಾಸಿಯಾದಾಗ ಮನೆ ಮದ್ದು ಮಾಡದೆ, ಶುದ್ಧ ಬಟ್ಟೆಯಲ್ಲಿ ಕಣ್ಣು ಮುಚ್ಚಿ ತಕ್ಷಣ ಆಸ್ಪತ್ರೆಗೆ ತೆರಳಬೇಕು. ನಗರ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದಲ್ಲಿ ಸಹಾಯವಾಣಿ 080-26707176 ಹಾಗೂ ಮೊ. 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮಿಂಟೋ ಪ್ರಾಧ್ಯಾಪಕಿ ಡಾ.ದಾಕ್ಷಾಯಿಣಿ ಮಾತನಾಡಿ, ಬೆಳಕಿನ ಹಬ್ಬ ಆರೋಗ್ಯಕರ ಹಾಗು ಪರಿಸರ ರಕ್ಷಕ ಹಬ್ಬವಾಗಿಯೂ ಆಚರಿಸಬೇಕು. ಈ ಕುರಿತು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಟಾಕಿ ಹಾನಿ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಮಿಂಟೋ ಆಸ್ಪತ್ರೆ ವತಿಯಿಂದ ಶಾಲಾ ಮಕ್ಕಳಿಗಾಗಿ “ಸುರಕ್ಷಿತ ದೀಪಾವಳಿ-ನನ್ನ ದೃಷ್ಟಿಕೋನ’ ಪ್ರಬಂಧ ಸ್ಪರ್ಧೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರಬಂಧ ಮಂಡಿಸಿದ್ದ ವಿಸ್ಡಮ್ ಶಾಲೆಯ ವಿದ್ಯಾರ್ಥಿನಿ ಇಂಚರ ಅವರಿಗೆ ಉಡುಗೊರೆ ನೀಡಲಾಯಿತು.