Advertisement
ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರ ಮಳೆಯ ಅಭಾವದಿಂದ ಶುಷ್ಕ ವಾತಾವರಣ ನಿರ್ಮಾಣವಾಗಿ ಅರಣ್ಯ ಪ್ರದೇಶದಲ್ಲಿ ತೇವಾಂಶವಿಲ್ಲದೆ ಬೇಸಗೆ ತೀಕ್ಷ್ಣತೆಯಿಂದ ಕಾಳ್ಗಿಚ್ಚು ಸೃಷ್ಟಿಯಾಗುತ್ತಿದೆ. ಸುಮಾರು 79.361 ಚ.ಕಿ.ಮೀ. ರಕ್ಷಿತ ಅರಣ್ಯ ಪ್ರದೇಶಕ್ಕೆ ಕಾಳ್ಗಿಚ್ಚಿನಿಂದ ಹಾನಿಯಾಗಿದೆ ಎಂದು ಅವರು ಹೇಳಿದರು.
ಇಲಾಖಾ ವಾಹನ ಮತ್ತು ರಕ್ಷಣಾ ಸಿಬಂದಿಯನ್ನು ಬೆಂಕಿ ರಕ್ಷಣಾ ಕೆಲಸಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ನಿಯೋಜಿಸಿಕೊಳ್ಳಲಾಗುತ್ತಿದೆ. ಬೇಸಗೆ ಕಾಲದಲ್ಲಿ ವಿಶೇಷ ಬೆಂಕಿ ಕಾವಲು ಶಿಬಿರಗಳನ್ನು ನಿರ್ಮಿಸಿ ಅರಣ್ಯವನ್ನು ಕಾಪಾಡಲಾಗುತ್ತದೆ. ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಾಕುವ ಪ್ರಕರಣ ಕಂಡುಬಂದರೆ ಅರಣ್ಯ ತಕ್ಷೀರು ದಾಖಲಿಸಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಖಾಲಿ ಇರುವ 2,668 ಮುಂಚೂಣಿ ಸಿಬಂದಿಯನ್ನು ನೇಮಕ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮುಂಚೂಣಿ ಸಿಬಂದಿಗೆ ವಿಶೇಷ ಭತ್ತೆ ಮಂಜೂರು ಮಾಡಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಅವಘಡಕ್ಕೆ ಸಿಲುಕಿ ಮೃತರಾದ ಮುರುಗೆಪ್ಪ ತಮ್ಮಣಗೋಳ ಕುಟುಂಬಕ್ಕೆ 25 ಲ.ರೂ.ಗಳನ್ನು ಬಂಡೀಪುರ ಅರಣ್ಯ ಪ್ರತಿಷ್ಠಾನದ ನಿಧಿಯಿಂದ ನೀಡಲಾಗಿದೆ ಮತ್ತು ಪತ್ನಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲಾಗುವುದು. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಬೆಂಕಿ ನಿಯಂತ್ರಣಕ್ಕಾಗಿ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಾಗಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಪರಿಹಾರೋಪಾಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.