ಬರ್ಲಿನ್: ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿ ವಿದೇಶಿ ಭದ್ರತಾ ಪಡೆ, ಅಫ್ಘಾನ್ ಸೇನೆ ವಿರುದ್ಧ ಅಪರಿಚಿತ ಗನ್ ಮ್ಯಾನ್ ಗಳು ಗುಂಡಿನ ದಾಳಿ ನಡೆಸುವ ಮೂಲಕ ಯುದ್ಧ ಭೀತಿ ಆರಂಭವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್ ನಿಂದ ಕನ್ನಡಿಗರನ್ನು ಕರೆತರಲು ಪ್ರಯತ್ನ ನಡೆಯುತ್ತಿದೆ: ಸಿಎಂ ಬೊಮ್ಮಾಯಿ
ತಾಲಿಬಾನ್ ಆಡಳಿತದಿಂದ ಭೀತಿಗೊಳಗಾಗಿರುವ ಸಾವಿರಾರು ಮಂದಿ ಅಫ್ಘಾನ್ ನಾಗರಿಕರು ಮತ್ತು ವಿದೇಶಿಯರು ಅಫ್ಘಾನ್ ನಿಂದ ಪರಾರಿಯಾಗಲು ವಿಮಾನ ನಿಲ್ದಾಣದಲ್ಲಿ ತುಂಬಿಕೊಂಡಿರುವುದಾಗಿ ವರದಿ ವಿವರಿಸಿದೆ.
ಗುಂಡಿನ ದಾಳಿಯಲ್ಲಿ ಅಫ್ಘಾನ್ ಸೈನಿಕನೊಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವುದಾಗಿ ಜರ್ಮನ್ ಸೇನೆ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಗುಂಡಿನ ದಾಳಿ ನಡೆಸಿದ್ದು ತಾಲಿಬಾನ್ ಉಗ್ರರೇ ಅಥವಾ ಅಪರಿಚಿತ ದುಷ್ಕರ್ಮಿಗಳೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಆಡಳಿತವನ್ನು ವಶಕ್ಕೆ ಪಡೆದ ನಂತರ ರಾಜಧಾನಿ ಕಾಬೂಲ್ ನಲ್ಲಿ ಅಮೆರಿಕ ಮತ್ತು ಅಂತರಾಷ್ಟ್ರೀಯ ಪಡೆಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದಾಗಿ ವರದಿ ಹೇಳಿದೆ.
ಭಾನುವಾರ ಕಾಬೂಲ್ ನಲ್ಲಿ ಕಾಲ್ತುಳಿತ ಮತ್ತು ಗುಂಡು ಹಾರಾಟದಿಂದ ಏಳು ಮಂದಿ ಸಾವನ್ನಪ್ಪಿದ್ದರು. ಏತನ್ಮಧ್ಯೆ ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಕಪಿಮುಷ್ಟಿಯಿಂದ 392 ಮಂದಿಯನ್ನು ದೇಶಕ್ಕೆ ಕರೆತರುವಲ್ಲಿ ಕೇಂದ್ರ ಯಶಸ್ವಿಯಾಗಿದೆ. ಈ ಪೈಕಿ ಏಳು ಮಂದಿ ಕನ್ನಡಿಗರೂ ಸೇರಿದ್ದರು.