Advertisement

3 ದಿನ ಕಳೆದರೂ ಆರದ ಅಗ್ನಿ

06:38 AM Mar 17, 2019 | Team Udayavani |

ಮಹದೇವಪುರ: ಕಣ್ಣೂರು ಸಮೀಪದ ಬೆಳ್ಳಹಳ್ಳಿ ಮತ್ತು ಮೀಟಗಾನಹಳ್ಳಿ ಕಲ್ಲು ಕ್ವಾರಿಯ ತ್ಯಾಜ್ಯವಿಲೇವಾರಿ ಘಟಕದ ಕಸಕ್ಕೆ ಹೊತ್ತಿಕೊಂಡಿರುವ ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಹರಸಹಾಸಪಡುತ್ತಿದ್ದಾರೆ.

Advertisement

ಕಸಕ್ಕೆ ಬುಧವಾರ ಹೊತ್ತಿಕೊಂಡ ಬೆಂಕಿ ಇದುವರೆಗೂ ನಿಯಂತ್ರಣಕ್ಕೆ ಬಂದಿಲ್ಲ. ಸತತ ಮೂರು ದಿನಗಳಿಂದ ತ್ಯಾಜ್ಯ ಹೊತ್ತಿ ಉರಿಯುತ್ತಿರುವ ಕಾರಣ, ಸುತ್ತಮುತ್ತಲ ಗ್ರಾಮಗಳಿಗೆ ದಟ್ಟ ಹೊಗೆ ಆವರಿಸಿಕೊಂಡಿದೆ. ಇದ್ದರಿಂದ ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಪರಿಸರ ಕೂಡ ಮಲಿನಗೊಂಡಿದೆ.

ತ್ಯಾಜ್ಯದಿಂದ ಉತ್ಪತ್ತಿಯಾಗುವ ಮಿಥೇನ್‌ ಗ್ಯಾಸ್‌ನಿಂದ ಹೊತ್ತಿಕೊಂಡಿರುವ ಬೆಂಕಿ, ಬಿಸಿಲ ತಾಪದ ಪರಿಣಾಮ, ಕ್ವಾರಿಯಿಂದ ಕ್ವಾರಿಗೆ ವ್ಯಾಪಿಸಿಕೊಂಡಿದ್ದು, ಇಡೀ ಘಟಕವನ್ನೇ ಅವರಿಸಿಕೊಂಡಿದೆ. ಬುಧವಾರದಿಂದಲೂ ಸ್ಥಳದಲ್ಲೇ ಬೀಡುಬಿಟ್ಟಿರುವ ಅಗ್ನಿಶಾಮಕ ದಳದ 12 ಮಂದಿ ಸಿಬ್ಬಂದಿ ಹಾಗೂ 2 ವಾಹನ ಬೆಂಕಿ ನಂದಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ದಿನಕ್ಕೆ 8ರಿಂದ 10 ಲಾರಿ ನೀರು ಬಳಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ಇಟಾಚಿ ಮೂಲಕ ಮಣ್ಣು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಲಾಗುತ್ತಿದೆ.

ರಸ್ತೆಯಲ್ಲೇ ನಿಂತ ಲಾರಿಗಳು: ಕಲ್ಲುಕ್ವಾರಿಗಳಲ್ಲಿ ಕಸಕ್ಕೆ ಬಿದ್ದ ಬೆಂಕಿ ನಿಯಂತ್ರಿಸಲು ಸಾಧ್ಯವಾಗದ ಕಾರಣ, ನಗರದಿಂದ ಕಸ ಹೊತ್ತು ತಂದಿರುವ ಲಾರಿಗಳು, ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ರಸ್ತೆಯಲ್ಲೇ ನಿಂತಿದ್ದು, ಸುಮಾರು 3 ಕಿ.ಮೀ ಉದ್ದದ ಲಾರಿಗಳ ಸಾಲು ನಿರ್ಮಾಣವಾಗಿದೆ. ಪರಿಣಾಮ, ಸುತ್ತಲ ಪ್ರದೇಶದಲ್ಲಿ ಕೊಳೆತ ತ್ಯಾಜ್ಯದ ದುರ್ವಾಸನೆ ವ್ಯಾಪಿಸಿದೆ.

ಪಾಲಿಕೆಯವರಿಂದಲೇ ಬೆಂಕಿ – ಆರೋಪ: ಕಲ್ಲುಕ್ವಾರಿಯಲ್ಲಿ ಭರ್ತಿಯಾಗಿರುವ ಕಸಕ್ಕೆ ಬೆಂಕಿ ಹಾಕಿದರೆ ಅದು ಸುಟ್ಟು ಬೂದಿಯಾಗುತ್ತದೆ. ನಂತರ ಮತ್ತಷ್ಟು ಕಸ ತಂದು ಸುರಿಯಲು ಸ್ಥಳಾವಕಾಶ ಸಿಗುತ್ತದೆ ಎಂಬ ದುರದ್ದೇಶದಿಂದ ಬಿಬಿಎಂಪಿಯವರೇ ಕಸಕ್ಕೆ ಬೆಂಕಿ ಹಾಕಿದ್ದು, ಈಗ ಬೇರೆಯವರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

Advertisement

ಬುಧವಾರದಿಂದಲೂ ದಟ್ಟ ಹೊಗೆ ಆವರಿಸಿರುವ ಕಾರಣ, ಬೆಳ್ಳಹಳ್ಳಿ ಮತ್ತು ಮೀಟಗಾನಹಳ್ಳಿ ಸುತ್ತಮುತ್ತಲಿನ ಜನರು ಉಸಿರಾಟ ತೋಂದರೆ (ಅಸ್ತಮಾ) ಸೇರಿ ನಾನಾ ಅನಾರೋಗ್ಯ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕಣ್ಣುಮುಚ್ಚಿ ಕುಳಿತ ಮಾಲಿನ್ಯ ನಿಯಂತ್ರಣ ಮಂಡಳಿ: ಕಣ್ಣೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಬಿಬಿಎಂಪಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಜಲಮೂಲ ಕಲುಷಿತಗೊಂಡಿದೆ. ಸ್ಥಳೀಯರು ವಿವಿಧ ಸಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಪರಿಸರ ಕಲುಷಿತಗೊಳ್ಳುತ್ತಿದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಾ.ಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನಂಜೇಗೌಡ ಆರೋಪಿಸಿದ್ದಾರೆ.

ಕ್ವಾರಿಯಲ್ಲಿನ ಕಸಕ್ಕೆ ಬೆಂಕಿ ಹೊತ್ತಿಕೊಳ್ಳಲು ಬಿಬಿಎಂಪಿಯೇ ಕಾರಣ. ತ್ಯಾಜ್ಯದಿಂದ ಉತ್ಪತ್ತಿಯಾಗುವ ಮಿಥೇನ್‌ ಗ್ಯಾಸ್‌ನಿಂದ ಬೆಂಕಿ ಹೊತ್ತಿಕೊಂಡಿದೆಯೋ ಅಥಾವ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೋ ಎಂದು ಪರಿಶೀಲಿಸಬೇಕು. ಕಣ್ಣೂರನ್ನು ಕಸದ ಸಮಸ್ಯೆಯಿಂದ ಮುಲ್ತಗೊಳಿಸಬೇಕು ಎಂದು ಕಣ್ಣೂರು ಗ್ರಾ.ಪಂ ಅಧ್ಯಕ್ಷ ಅಶೋಕ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next