ನೆಲಮಂಗಲ: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಯನಯದ “ಭಜರಂಗಿ-2′ ಚಿತ್ರದ ಸೆಟ್‌ನಲ್ಲಿ ಸತತ ಎರಡನೇ ಬಾರಿ ಬೆಂಕಿ ಕಾಣಿಸಿಕೊಂಡಿದೆ. ಚಿತ್ರದ ಪ್ರಮುಖ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ನೆಲಮಂಗಲ ಸಮೀಪದ ಶ್ರೀನಿವಾಸಪುರದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಬೃಹತ್ ಸೆಟ್‌ಗೆ ಭಾನುವಾರ ಬೆಂಕಿ ಹೊತ್ತಿಕೊಂಡು ಸೆಟ್ ಸಂಪೂರ್ಣ ಸುಟ್ಟುಹೋಗಿದೆ.
ಸ್ಟುಡಿಯೋದಲ್ಲಿ ಒಟ್ಟು 13 ದಿನ ಶೂಟಿಂಗ್ ನಡೆಸುವ ಯೋಜನೆಯಿದ್ದು, ಕೇವಲ ನಾಲ್ಕು ದಿನಗಳಲ್ಲಿ ಮೂರು ಕಂಟಕ ಎದುರಾಗಿವೆ. ಜ.16ರಂದು ಶಾರ್ಟ್ ಸರ್ಕಿಟ್‌ನಿಂದಾಗಿ ಸೆಟ್‌ಗೆ ಬೆಂಕಿ ಹೊತ್ತಿಕೊಂಡರೆ, ಜ.18ರಂದು ಕಲಾವಿದರು ಸಂಚರಿಸುತಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.
ಭಾನುವಾರ ಮತ್ತೆ ಬೆಂಕಿಕಾಣಿಸಿಕೊಂಡಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೆಟ್ ಭಸ್ಮವಾಗಿದೆ. ಈ ಬಾರಿಯೂ ಶಾರ್ಟ್ ಸರ್ಕಿಟ್‌ನಿಂದ ಬಲ್ಬ್ ಸಿಡಿದು, ಬೆಂಕಿ ಹೊತ್ತಿಕೊಂಡಿದೆ. 2 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.
ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಎಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಸೆಟ್ ಸಂಪೂರ್ಣ ಸುಟ್ಟಿರುವ ಕಾರಣ, ಮತ್ತೂಮ್ಮೆ ನಿರ್ಮಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಶಿವಣ್ಣ ಅಪಾಯದಿಂದ ಪಾರು: ಭಾನುವಾರ ಸೆಟ್‌ಗೆ ಬೆಂಕಿ ಕಾಣಿಸಿಕೊಂಡಾಗ ಸೆಟ್‌ನಲ್ಲಿ ನಾಯಕನಟ ಶಿವರಾಜ್‌ಕುಮಾರ್ ಸೇರಿ 400ಕ್ಕೂ ಹೆಚ್ಚು ಕಲಾವಿದರು ಹೊಡೆದಾಟದ ದೃಶ್ಯವೊಂದರ ಚಿತ್ರೀಕರಣದಲ್ಲಿ ತೊಡಗಿದ್ದರು.
“ಮೂರು ಬಾರಿ “ಭಜರಂಗಿ-2′ ಚಿತ್ರದ ಚಿತ್ರೀಕರಣದ ವೇಳೆ ತೊಂದರೆಯಾಗಿರುವುದು ಬೇಸರ ತಂದಿದೆ. ಆದರೆ, ಕಲಾವಿದರಿಗೆ ತೊಂದರೆಯಾಗಿಲ್ಲವೆಂಬುದು ನೆಮ್ಮದಿ ವಿಚಾರ. ನಿರ್ಮಾಪಕರಿಗೆ ಬಹಳಷ್ಟು ನಷ್ಟವಾಗಿದೆ’ ಎಂದು ಶಿವರಾಜಕುಮಾರ್ ಬೇಸರ ವ್ಯಕ್ತಪಡಿಸಿದರು.