ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಝಾರ್ಖಂಡ್ ತಂಡ ಉಳಿದುಕೊಂಡಿದ್ದ ಹೊಸದಿಲ್ಲಿಯ ದ್ವಾರಕಾದಲ್ಲಿರುವ “ವೆಲ್‌ಕಮ್ ಐಟಿಸಿ ಪಂಚತಾರಾ ಹೊಟೇಲ್’ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಪರಿಣಾಮ, ಈ ಹೊಟೇಲ್‌ನಲ್ಲಿದ್ದ 540 ಅತಿಥಿ ಗಳನ್ನು ಹೊಟೇಲ್ ಸಿಬಂದಿ ಕೂಡಲೇ ಸುರಕ್ಷಿತವಾಗಿ ಹೊರಕಳುಹಿಸಿದ್ದಾರೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಶುಕ್ರವಾರ ಹೊಸದಿಲ್ಲಿಯಲ್ಲಿ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯ ಝಾರ್ಖಂಡ್ ಮತ್ತು ಬಂಗಾಲ ತಂಡಗಳ ನಡುವೆ ನಡೆಯಬೇಕಾಗಿತ್ತು. ಹೀಗಾಗಿ ಧೋನಿ ನೇತೃತ್ವದ ತಂಡ ಐಟಿಸಿ ವೆಲ್‌ಕಮ್ ಹೊಟೇಲ್‌ನಲ್ಲಿ ತಂಗಿತ್ತು. ಶುಕ್ರವಾರ ಬೆಳಗ್ಗೆ 6.30ರ ಸಮಯದಲ್ಲಿ ಹೊಟೇಲ್ ಪಕ್ಕದಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಇದರಿಂದ ಹೊಟೇಲ್‌ನ ಫೈರ್ ಅಲಾರ್ಮ್ ಹೊಡೆದುಕೊಂಡಿದೆ. ತತ್‌ಕ್ಷಣವೇ ಉಪಾಹಾರ ಸೇವಿಸುತ್ತಿದ್ದ ಝಾರ್ಖಂಡ್ ತಂಡದ ಆಟಗಾರರ ಸಹಿತ ಹೊಟೇಲ್‌ನಲ್ಲಿದ್ದ ಎಲ್ಲ 540 ಅತಿಥಿಗಳನ್ನು ಸುರಕ್ಷತೆ ದೃಷ್ಟಿಯಿಂದ ಹೊರತರಲಾಯಿತು. ಹೊಟೇಲ್‌ನಲ್ಲಿದ್ದವರಿಗೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಅನಂತರ ಝಾರ್ಖಂಡ್ ತಂಡದ ಆಟಗಾರರನ್ನು ಬೇರೆ ಹೊಟೇಲ್‌ಗೆ ಸ್ಥಳಾಂತರಿಸಲಾಯಿತು. ಫೈರ್ ಅಲಾರ್ಮ್ ಬಾರಿಸುತ್ತಿದ್ದಂತೆಯೇ 30 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ. ಬೆಳಗ್ಗೆ 9.30ರ ಒಳಗೆ ಕಾಂಪ್ಲೆಕ್ಸ್‌ಗೆ ಬಿದ್ದ ಬೆಂಕಿಯನ್ನು ನಂದಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “31 ಕೊಠಡಿಗಳನ್ನು ಝಾರ್ಖಂಡ್ ಮತ್ತು ತಮಿಳುನಾಡು ಆಟಗಾರ ರಿಗೆ ಕಾದಿರಿಸಲಾಗಿತ್ತು. ಈಗಾಗಲೇ ತನಿಖೆ ಕೈಗೊಂಡಿದ್ದೇವೆ. ಬೆಂಕಿ ಅನಾಹುತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ತನಿಖೆಯ ಅನಂತರ ಗೊತ್ತಾಗಲಿದೆ…’ ಎಂದು ಹೇಳಿದ್ದಾರೆ.
ಝಾರ್ಖಂಡ್ ಕೋಚ್ ರಾಜೀವ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, “ಹೊಟೇಲ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಬೆಂಕಿ ಅನಾಹುತದಿಂದ ನಮಗೇನೂ ಅಪಾಯವಾಗಿಲ್ಲ. ನಾವೆಲ್ಲ ಸುರಕ್ಷಿತವಾಗಿದ್ದೇವೆ. ನಮ್ಮ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ. ಆದರೆ ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರಗೊಂಡಿದ್ದೇವೆ’ ಎಂದಿದ್ದಾರೆ.
ಸೆಮಿಫೈನಲ್ ಮುಂದೂಡಿಕೆ: ವೇಳಾಪಟ್ಟಿ ಯಂತೆ ಶುಕ್ರವಾರ ವಿಜಯ್ ಹಜಾರೆ ಟ್ರೋಫಿಯ ಸಮಿಫೈನಲ್ ಪಂದ್ಯ ಝಾರ್ಖಂಡ್ ಮತ್ತು ಬಂಗಾಲ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಬೆಂಕಿ ಅವಘಡದಿಂದ ಝಾರ್ಖಂಡ್ ಆಟಗಾರರು ಒತ್ತಡಕ್ಕೊಳಗಾಗಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ ಬಿಸಿಸಿಐ ಈ ಪಂದ್ಯವನ್ನು ಶನಿವಾರಕ್ಕೆ ಮುಂದೂಡಿದೆ. ಇದರಿಂದ ರವಿವಾರದ ಫೈನಲ್ ಪಂದ್ಯ ಕೂಡ ಮುಂದೂಡಲ್ಪಡುವ ಸಾಧ್ಯತೆಯಿದೆ.