Advertisement

ಭತ್ತಕ್ಕೆ ಬೆಂಕಿ ರೋಗ: ಎಕರೆಗಟ್ಟಲೆ ಬೆಳೆ ನಾಶ 

11:21 AM Sep 10, 2018 | |

ಆಲಂಕಾರು: ಹದಿನೈದು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನೆರೆ ಉಕ್ಕೇರಿ, ಗದ್ದೆಗಳಲ್ಲಿ ವಾರಗಟ್ಟಲೆ ನೀರು ನಿಂತು ಪೈರು ಮೂಡುವ ಹಂತದಲ್ಲಿದ್ದ ಭತ್ತದ ಸಸಿಗಳು ಕೊಳೆತು ಹೋಗಿದ್ದವು. ಅದಾಗಿ ಅಳಿದುಳಿದ ಭತ್ತದ ಗದ್ದೆಗಳಲ್ಲಿ ಈಗ ಬೆಂಕಿ ರೋಗ ಕಾಣಿಸಿಕೊಂಡಿದೆ. ಇದರಿಂದ ಎಕರೆಗಟ್ಟಲೆ ಬೆಳೆ ಹಾನಿಯಾಗಿದ್ದು, ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ.

Advertisement

ನಾಟಿ ಮಾಡಿ ತೆನೆ ಕಟ್ಟುವ ಹಂತದಲ್ಲಿರುವ ಎರಡು ತಿಂಗಳ ಅವಧಿಯ ಪೈರಿಗೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ನಡುಮನೆ ಸಹಿತ ಕುಮಾರಧಾರಾ ನದಿ ತಟದಲ್ಲಿರುವ ಬುಡೇರಿಯಾ, ಪಜ್ಜಡ್ಕ, ಪೊಯ್ಯಲಡ್ಡ, ಶರವೂರು ಮೊದಲಾದ ಪ್ರದೇಶಗಳಲ್ಲಿ ಈ ರೋಗ ಅತೀ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

ಕುಮಾರಧಾರಾ ನದಿ ತಟದಲ್ಲಿಯೇ ಅಪಾರ ಪ್ರಮಾಣದ ಭತ್ತದ ಗದ್ದೆಗಳಿದ್ದು, ಪ್ರತೀ ವರ್ಷವು ನೆರೆ ನೀರು ಆಕ್ರಮಿಸುವುದು ಸಹಜ. ನೆರೆ ನೀರು ಮೂರ್ನಾಲ್ಕು ದಿನ ಭತ್ತದ ಗದ್ದೆಯಲ್ಲಿದ್ದು, ಅನಂತರ ಇಳಿಮುಖವಾಗುತ್ತಿತ್ತು. ಇದರಿಂದ ಭತ್ತದ ಕೃಷಿಗೆ ಅಂತಹ ತೊಂದರೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಏರಿದ ನೆರೆ ಹತ್ತು ದಿನ ಗದ್ದೆಯಲ್ಲೇ ನಿಂತ ಕಾರಣ ನಾಟಿ ಮಾಡಿದ ಪೈರು ಸಂಪೂರ್ಣ ಕೊಳೆತುಹೋಗಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮವೊಂದರಲ್ಲೇ 17 ಎಕರೆ ಗದ್ದೆಯಲ್ಲಿ ನಾಟಿ ಮಾಡಿದ ಪೈರು ನಾಶವಾಗಿತ್ತು. ಈಗ ಬೆಂಕಿ ರೋಗ ಕಾಣಿಸಿಕೊಂಡು ರೈತರ ಚಿಂತೆ ಹೆಚ್ಚಿಸಿದೆ.

ಪ್ರಾಣಿ ಪಕ್ಷಿಗಳ ದಾಳಿ ಭೀತಿ
ಮೊದಲ ಅವಧಿಯ ಬೆಳೆ (ಏನೇಲು) ಫ‌ಸಲನ್ನು ರೈತರು ಕಳೆದುಕೊಂಡಿದ್ದಾರೆ. ಮುಂದೆ ಸುಗ್ಗಿಯ ಕಾಲಕ್ಕೆ ಸರಿಯಾಗುವಂತೆ ನಾಟಿ ಕಾರ್ಯ ಮಾಡಬೇಕಾಗಿದೆ. ಆದರೆ ಅಲ್ಲಿಯವರೆಗೆ ಗದ್ದೆಯನ್ನು ಖಾಲಿ ಬಿಡುವ ಹಾಗಿಲ್ಲ. ಈ ಕಾರಣಕ್ಕಾಗಿ ಮುಂದಿನ 15 ದಿನಗಳಲ್ಲೇ ಮರು ನಾಟಿಗೆ ಸಿದ್ಧತೆಗಳು ನಡೆಯುತ್ತಿವೆ. ಇದರ ಕಟಾವು ಕಾರ್ಯ ಮೂರು ತಿಂಗಳ ಬಳಿಕ ನಡೆಯುತ್ತದೆ. ಆಗ ಗದ್ದೆಗಳಿಗೆ ಕಾಡು ಪ್ರಾಣಿ, ಪಕ್ಷಿಗಳು ದಾಳಿ ಮಾಡಿ, ಫ‌ಸಲು ಹಾಳು ಮಾಡುತ್ತವೆ. ಆಗಲೂ ರೈತರು ನಷ್ಟ ಅನುಭವಿಸುತ್ತಾರೆ.

ಎಲೆ ಮಡಚುವ ರೋಗ
ಬೆಂಕಿ ರೋಗದ ಜತೆಗೆ ಭತ್ತದ ಪೈರಿಗೆ ಎಲೆ ಮಡಚುವ ರೋಗವು ಅಲ್ಲಲ್ಲಿ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಕ್ಲೋರೋಪೋಯಿರಿಪಾಸ್‌ ಮತ್ತು ಎಕೋಲೆಕ್ಸ್‌ ದ್ರಾವಣವನ್ನು 1ಲೀ. ನೀರಿಗೆ 2 ಮಿ.ಮೀ. ಪ್ರಮಾಣದಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಹೇಳಿದ್ದಾರೆ. 

Advertisement

ಫ‌ಸಲು ನಷ್ಟ; ಮರು ನಾಟಿ
ಭತ್ತದ ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ದುಬಾರಿ ಸಂಬಳ ನೀಡಿ ನಾಟಿ ಕಾರ್ಯ ಮಾಡಿಸಬೇಕಾಗಿದೆ. ನೆರೆ ನೀರಿ ನಿಂದಾಗಿ ಪೈರು ಕೊಳೆತಿರುವ ಗದ್ದೆಗಳಲ್ಲಿ ಮರು ನಾಟಿ ಮಾಡಬೇಕಾಗಿದೆ. ಅಷ್ಟಿಷ್ಟು ಉಳಿದಿರುವ ಗದ್ದೆಗಳಲ್ಲಿ ಬೆಂಕಿ ರೋಗ ಕಾಣಿಸಿದ್ದು, ಇಲ್ಲಿಯೂ ಬೆಳೆಯನ್ನು ಪೂರ್ಣವಾಗಿ ನಾಶಮಾಡಿ, ಹೊಸದಾಗಿ ನಾಟಿ ಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಹೀಗಾಗಿ, ಈ ಸಲ ನಿರೀಕ್ಷಿತ ಫ‌ಸಲು ಪಡೆಯುವುದು ಅಸಾಧ್ಯವಾಗಿದೆ.

ವಿಟಮಿನ್‌ ಕೊರತೆಯಿಂದ ರೋಗ
ವಿಪರೀತ ಮಳೆಯ ಕಾರಣ ಮಣ್ಣಿನಲ್ಲಿ ವಿಟಮಿನ್‌ ಕೊರತೆ ಉಂಟಾಗಿ ಬೆಂಕಿ ರೋಗ ಕಾಣಿಸಿಕೊಂಡಿದೆ. ಕಡಬ ತಾಲೂಕಿನ ಆಲಂಕಾರಿನಲ್ಲಿ ಪ್ರಥಮ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ನಿಯಂತ್ರಣಕ್ಕೆ ಕಾರ್ಬನ್‌ ಡೈಜಿನ್‌ ಕೀಟನಾಶಕವನ್ನು ಒಂದು ಲೀಟರ್‌ಗೆ ಒಂದು ಮಿ.ಮೀ. ಸಮ ಪ್ರಮಾಣದಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಅಥವಾ ಯೂರಿಯಾ ಮತ್ತು ಪೊಟಾಶ್‌ ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೈರಿಗೆ ಹಾಕಬೇಕು. ಎನ್‌ಪಿಕೆ 19-19-19ನ್ನು 1 ಲೀ. ನೀರಿಗೆ 5 ಗ್ರಾಂ. ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಬೆಂಕಿ ರೋಗ ನಿಯಂತ್ರಣ ಸಾಧ್ಯ.
– ತಿಮ್ಮಪ್ಪ ಗೌಡ,
ಕಡಬ ಹೋಬಳಿ ಸಹಾಯಕ ಕೃಷಿ ಅಧಿಕಾರಿ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next