ಕುಂದಾಪುರ: ಮೀನು ಗಾರರ ಸಂಕಷ್ಟ ಅರಿತಿದ್ದೇನೆ. ಘಟನೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆ ಮಾತನಾಡಿ ದ್ದೇನೆ. ಸರಕಾರದಿಂದ ಏನು ಕೊಡಲು ಸಾಧ್ಯವೋ ಅದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಷ್ಟದ ಪರಿಸ್ಥಿತಿಯಲ್ಲಿ ಮೀನುಗಾರರ ಜತೆಗೆ ಸರಕಾರ ನಿಲ್ಲುತ್ತದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ಗಂಗೊಳ್ಳಿಯಲ್ಲಿ ಆಗಿರುವ ಅಗ್ನಿ ಆಕಸ್ಮಿಕವನ್ನು ವೀಕ್ಷಿಸಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿ ಸಂಪೂರ್ಣ ಸುಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಘಟನೆ ಬಗ್ಗೆ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿವೆ. ಸಾವಿರಾರು ಕೋಟಿ ರೂ. ಆಸ್ತಿ ಬಂದರು ಪ್ರದೇಶಗಳಲ್ಲಿ ಇರುವುದರಿಂದ ಬಂದರಿನಲ್ಲಿ ಇಲಾಖೆ ಅಥವಾ ವಿಮಾ ಕಂಪೆನಿ ಮೂಲಕ ಪಂಪ್ ಹೌಸ್ ನಿರ್ಮಾಣದ ಯೋಚನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ನೋಡಿ ಕೊಳ್ಳಬೇಕಿದೆ. ಪಂಚಾಯತ್‌ಗೆ ಇದರಲ್ಲಿ ಯಾವುದೇ ಆದಾಯ ಇಲ್ಲ. ಪಂಚಾಯತ್ ವಸೂಲಿ ಮಾಡುತ್ತಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
7 ಕೋ.ರೂ. ನಷ್ಟ
6ರಿಂದ 7 ಕೋಟಿ ರೂ. ನಷ್ಟ ಅಂದಾ ಜಿಸಲಾಗಿದೆ. ಕುಂದಾಪುರ, ಬೈಂದೂರು, ಉಡುಪಿಯ 3 ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ನೂರಾರು ಮಂದಿ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಆನಂದ ಹೆಗ್ಡೆ ಅವರು ತಮ್ಮ ವಾಹನದಲ್ಲಿ ನೀರು ತುಂಬಿಸಿಕೊಂಡು ಬಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.
ಭೇಟಿ: ಕುಂದಾಪುರ ಉಪವಿಭಾಗಾ ಧಿಕಾರಿ ರಶ್ಮಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಇಲಾಖೆಯ ಅಧಿಕಾರಿ ಅಂಜನಾದೇವಿ, ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಜಿ.ಪಂ. ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಸಿಪಿಐ ಸವಿತೃತೇಜ, ಪಿಎಸ್‌ಐ ಹರೀಶ್ ಆರ್. ನಾಯ್ಕ, ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ್ ಕನಶೆಟ್ಟಿ, ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಂಜಪ್ಪ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ಗೌರಿ ದೇವಾಡಿಗ, ಬಿ.ಎಸ್. ಸುರೇಶ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಸುರೇಂದ್ರ ಖಾರ್ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅವಘಡ ಸ್ಥಳಕ್ಕೆ ಶಾಸಕದ್ವಯರ ಭೇಟಿ
ತಲಾ 50 ಲಕ್ಷ ರೂ. ಪರಿಹಾರಕ್ಕೆ ಯಶ್‌ಪಾಲ್ ಆಗ್ರಹ
ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಯಶ್‌ಪಾಲ್ ಮಾತನಾಡಿ, ಸುಮಾರು 10 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ರಾಜ್ಯ ಸರಕಾರ ಕೂಡಲೇ ಬೋಟ್ ಮಾಲಕರಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಿ ಮೀನು ಗಾರರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಬೇಕು ಎಂದರು.
ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಜತೆಯಾಗಿ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ವಿಶೇಷ ಪ್ರಕರಣದಡಿ ಗರಿಷ್ಠ ಪರಿಹಾರ ಒದಗಿ ಸುವಂತೆ ಮನವಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕರಾವಳಿಯ ಎಲ್ಲ ಮೀನುಗಾರಿಕೆ ಬಂದರುಗಳಲ್ಲಿ ಬೋಟ್ ರಿಪೇರಿಗೆ ತಂಗುವ ಸ್ಥಳವನ್ನು ನಿಗದಿ ಮಾಡಿ ಅಗ್ನಿಶಾಮಕ ಘಟಕ ಸಹಿತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಸ್ಟರ್‌ಪ್ಲಾನ್ ಮಾಡಲು ಮೀನುಗಾರಿಕೆ ಇಲಾಖೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.