ನವದೆಹಲಿ: ಲೋಕಜನಶಕ್ತಿ ಪಕ್ಷದ(ಎಲ್ ಜೆಪಿ) ಸಂಸದ, ಚಿರಾಗ್ ಪಾಸ್ವಾನ್ ಸೋದರ ಸಂಬಂಧಿ ಪ್ರಿನ್ಸ್ ರಾಜ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳಗ್ಗೆ ಎದ್ದು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ
ಬಿಹಾರದ ಸಮಸ್ಠಿಪುರ್ ಲೋಕಸಭಾ ಕ್ಷೇತ್ರದ ಸಂಸದ ಪ್ರಿನ್ಸ್ ರಾಜ್ ತನ್ನ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಒಡ್ಡಿರುವುದಾಗಿ ಲೋಕಜನಶಕ್ತಿ ಪಕ್ಷದ ಕಾರ್ಯಕರ್ತೆ ದೆಹಲಿ ಕೊನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ವರದಿ ಹೇಳಿದೆ.
ಮೂರು ತಿಂಗಳ ಹಿಂದೆ ಮಹಿಳೆ ದೂರು ನೀಡಿದ್ದು, ಸೆಪ್ಟೆಂಬರ್ 9ರಂದು ದೆಹಲಿ ಕೋರ್ಟ್ ನೀಡಿರುವ ಆದೇಶದ ನಂತರ ಎಫ್ ಐಆರ್ ದಾಖಲಾಗಿದೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಪರಿಣಾಮ ಮಹಿಳೆ ಜುಲೈನಲ್ಲಿ ಕೋರ್ಟ್ ಮೆಟ್ಟಿಲೇರಿದ್ದಳು.
ನನ್ನ ವಿರುದ್ಧ ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು, ಅಲ್ಲದೇ ಇದೊಂದು ಕ್ರಿಮಿನಲ್ ಸಂಚು, ನನ್ನ ಚಾರಿತ್ರ್ಯ ವಧೆ ಮಾಡುವ ದುರುದ್ದೇಶ ಹೊಂದಿರುವುದಾಗಿ ಪ್ರಿನ್ಸ್ ರಾಜ್ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.