ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅವರನ್ನು ʻರಾವಣʼ ಎಂದು ಸಂಬೋಧಿಸಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಉದ್ದೇಶಿಸಿ, ʻರಾಜಸ್ಥಾನ ರಾಜಕೀಯದಲ್ಲಿ ಗೆಹ್ಲೋಟ್ ರಾವಣ ಇದ್ದಂತೆ. ಹಾಗಾಗಿ ಅವರನ್ನು ಕಿತ್ತೊಗೆದು ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಬೇಕೆಂಬ ನಿರ್ಧಾರವನ್ನು ನೀವು ಕೈಗೊಳ್ಳಬೇಕುʼ ಎಂಬ ಹೇಳಿಕೆ ನೀಡಿದ್ದ ಗಜೇಂದ್ರ ಸಿಂಗ್ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು.
ರಾಜಸ್ಥಾನದ ಚಿತ್ತೋಗಢದಲ್ಲಿ ಗುರುವಾರ ನಡೆದ ʻಜನಾಕ್ರೋಶʼ ರ್ಯಾಲಿಯ ಸಂದರ್ಭ ಗಜೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವರ ವಿರುದ್ಧ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಸುರೇಂದ್ರ ಸಿಂಗ್ ಜಡಾವತ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಗಜೇಂದ್ರ ಸಿಂಗ್ ಶೇಖಾವತ್ ಅವರಾಡಿರುವ ʻರಾವಣʼ ಮಾತುಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಹೀಗಾಗಿ ಅವರ ವಿರುದ್ಧ IPC ಸೆಕ್ಷನ್ 143,153,295 A,500,504,505,511 ಅಡಿಯಲ್ಲಿ ಕೇಸುಗಳನ್ನು ದಾಖಲಿಸಲಾಗಿದೆʼ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:
Mann Ki Baat: ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರಬೇಕು: ಪ್ರಮೋದ ಸಾವಂತ್