ಬೆಂಗಳೂರು: ಕಂಪನಿಯ ಡೇಟಾ ಕಳವು ಮಾಡಿ ಗ್ರಾಹಕರ ಜತೆ ನೇರವಾಗಿ ವ್ಯವಹಾರ ನಡೆಸುವ ಮೂಲಕ ಸಂಸ್ಥೆಗೆ ನಷ್ಟ ಉಂಟುಮಾಡಿದ್ದ ಕನ್ಸಲ್ಟಂಟ್ ಕಂಪನಿಯ ಮೂವರು ಮಾಜಿ ಉದ್ಯೋಗಿಗಳ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾಗ್ನಾಸಾಫ್ಟ್ ಕನ್ಸಲ್ಟಿಂಗ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಅಧಿಕಾರಿ ಎಂ.ಬಿ.ಸಿದ್ದರಾಮಣ್ಣ ಅವರು ನೀಡಿದ ದೂರಿನ್ವಯ ಕಂಪನಿಯ ಮಾಜಿ ಉದ್ಯೋಗಿಗಳಾದ ರಘುವನಹಳ್ಳಿ ನಿವಾಸಿ ವೆಂಕಟೇಶ ಬಾಬು (42), ಬಸವನಗುಡಿ ನಿವಾಸಿ ಮುಸ್ತಾಕ್ ಅಹ್ಮದ್ (37) ಮತ್ತು ಅಕ್ಷಯನಗರ ನಿವಾಸಿ ಸುದೀಪ್ ಸಿಂಗ್ ರಾಥೋಡ್ (37) ಎಂಬವರ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳು ಕೆಲ ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ರಾಜೀನಾಮೆ ನೀಡುವ ಮೊದಲು ಕಂಪನಿಯಲ್ಲಿದ್ದ ಗ್ರಾಹಕರ ಡೇಟಾ ಕಳವು ಮಾಡಿದ್ದರು. ಈ ಮೂಲಕ ದೇಶ ಮತ್ತು ವಿದೇಶದಲ್ಲಿರುವ ಕಂಪನಿಯ ಗ್ರಾಹಕರ ಜತೆ ನೇರವಾಗಿ ವ್ಯವಹರಿಸಿ ಕಂಪನಿಗೆ ಅಪಾರ ನಷ್ಟ ಉಂಟು ಮಾಡಿದ್ದಾರೆ ಎಂದು ಸಿದ್ದರಾಮಣ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ಹತ್ತು ತಿಂಗಳ ಹಿಂದೆಯೇ ಡೇಟಾ ಕಳ್ಳತನ ಮಾಡಿದ್ದು, ಲಂಡನ್‌ನ ಗ್ರಾಹಕರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಕಂಪನಿಯಲ್ಲಿ ಆಂತರಿಕ ತನಿಖೆ ನಡೆಸಿ, ಕಂಪನಿಯ ಸರ್ವರ್‌ಗಳನ್ನು ಪರಿಶೀಲಿಸಿದಾಗ 2018ರ ಜನವರಿಯಿಂದ ಸೆಪ್ಟೆಂಬರ್‌ವರೆಗೂ ಐದು ಬಾರಿ ಡೇಟಾ ಕಳವು ಆಗಿರುವುದು ಕಂಡು ಬಂದಿದೆ.
ಆರೋಪಿಗಳು ಕಂಪನಿಯ ಇ-ಮೇಲ್‌ನಿಂದಲೇ ತಮ್ಮ ಇ-ಮೇಲ್‌ಗೆ ಡೇಟಾ ವರ್ಗಾವಣೆ ಮಾಡಿಕೊಂಡಿದ್ದಾರೆ. ಕಂಪನಿ ಸಿಬ್ಬಂದಿಯ ಖಾಸಗಿ ವಿವರಗಳು, ಕಂಪನಿ ಸಾಫ್ಟ್‌ವೇರ್‌ಗಳ ಕೀಗಳು ಹಾಗೂ ದೇಶ-ವಿದೇಶದಲ್ಲಿರುವ ಕಂಪನಿಯ ಗ್ರಾಹಕರ ಡೇಟಾ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.