ಮುಂಬೈ : ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘಿಸಿದ ಆರೋಪದಡಿ ಬಾಲಿವುಡ್ ನಟಿ ಗೌಹರ್ ಖಾನ್ ವಿರುದ್ಧ ಸೋಮವಾರ (ಮಾರ್ಚ್ 15) ಪ್ರಕರಣ ದಾಖಲಾಗಿದೆ. ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ನಟಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟಿ ಗೌಹರ್ ಖಾನ್ ಅವರಿಗೆ ಕೋವಿಡ್-19 ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ. ನಿಯಮಾವಳಿಗಳ ಪ್ರಕಾರ ಅವರು ಮನೆಯಲ್ಲಿ ಕ್ವಾರೆಂಟೈನ್ ಇರಬೇಕಾಗಿತ್ತು. ಆದರೆ, ಸರ್ಕಾರದ ಕೋವಿಡ್ ನಿಗ್ರಹದ ನೀತಿ-ನಿಮಯಗಳನ್ನು ಗಾಳಿಗೆ ತೂರಿ, ಸಿನಿಮಾ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ನಟಿ ಖಾನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿರುವ ಬದಲು ಶೂಟಿಂಗ್‍ಗೆ ತೆರಳಿರುವ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಅಧಿಕಾರಿಗಳು, ನಟಿಮಣಿಯ ವಿರುದ್ಧ ಕೋವಿಡ್-ನಿಯಮಾವಳಿ ಉಲ್ಲಂಘನೆ ಆರೋಪದಡಿ ದೂರು ದಾಖಲಿಸಿದ್ದಾರೆ.
ನಟಿಯ ವಿರುದ್ಧ ದಾಖಲಾದ ಎಫ್‍ಐಆರ್ ಪ್ರತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೆಶನ್, ಸಮಾಜದ ಆರೋಗ್ಯ ವಿಚಾರದಲ್ಲಿ ಹೊಂದಾಣಿಕೆ ಅಸಾಧ್ಯ. ಕಾನೂನು ಎಲ್ಲರಿಗೂ ಒಂದೆ. ಕೋವಿಡ್ ನಿಯಮಾವಳಿಗಳು ಎಲ್ಲರಿಗೂ ಅನ್ವಯಿಸುತ್ತವೆ. ಎಲ್ಲರೂ ಅವುಗಳನ್ನು ಪಾಲಿಸಿ ಕೋವಿಡ್ ವೈರಸ್‍ಗೆ ಕಡಿವಾಣ ಹಾಕಲು ಸಹಕರಿಸಬೇಕೆಂದು ಕೇಳಿಕೊಂಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಕೋವಿಡ್-19 ಎರಡನೇ ಅಲೆ ಹೆಚ್ಚಿದೆ. ಈಗಾಗಲೇ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಹಲವು ಮಾರ್ಗಸೂಚಿ ನಿಯಮಗಳನ್ನು ಮಹಾ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.