ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮೇಧಿನಿಪುರ ಜಿಲ್ಲೆಯ ಕಾಂತಿ ನಗರಪಾಲಿಕೆಯ ಕಚೇರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆಂದು ಬಿಜಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಆರೋಪಿಸಲಾಗಿದೆ. ಈ ಬಗ್ಗೆ ಕಾಂತಿ ನಗರಪಾಲಿಕೆ ಸದಸ್ಯ ರತನ್ ದೀಪ್ ಮನ್ನಾ ಎಂಬವರು ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 29ರಂದು ಮಧ್ಯಾಹ್ನ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿಯವರ ಸೂಚನೆಯಂತೆ ಮುನಿಸಿಪಾಲಿಟಿ ಕಚೇರಿಯಿಂದ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯಲಾಗಿದೆ. ಬಲವಂತವಾಗಿ, ಕಾನೂನಿಗೆ ವಿರುದ್ದವಾಗಿ ಬೀಗ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರಿಹಾರ ಸಾಮಾಗ್ರಿಗಳನ್ನು ದುರುಪಯೋಗ ಮಾಡಿದ ಬಗ್ಗೆ ಬಿಜೆಪಿ ನಾಯಕರು ತ್ರಿಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದರು. ಆದರೆ ಸದ್ಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಅದೇ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಯಾವಾಗ ಕೇಳುತ್ತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ
ಸುವೇಂದು ಅಧಿಕಾರಿ ಆಪ್ತ ರಾಖಲ್ ಬೆರಾ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ಎರಡು ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ರಾಖಲ್ ವಿರುದ್ಧ ದೂರು ನೀಡಲಾಗಿತ್ತು. ಅವರ ಬಂಧನವಾದ ದಿನವೇ ಅಧಿಕಾರಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.