ಹಾನಗಲ್ಲ: ತಾಲೂಕಿನ 180 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಬಾಳಂಬೀಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಶ್ರೀನಿವಾಸ ಮಾನೆ ಅವರು, ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ ಕೆರೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಳಂಬೀಡ ಗ್ರಾಮದ ಬಳಿಯ ಏತ ನೀರಾವರಿಯ ಪಂಪ್‌ಹೌಸ್‌ಗೆ ಭೇಟಿ ನೀಡಿದ ಶಾಸಕರು, ಪಂಪ್ ಮತ್ತು ಮೋಟರ್‌ಗಳ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿ ವೀಕ್ಷಿಸಿದರು. ವಿತರಣಾ ಜಾಲದ ಕುರಿತು ಅಧಿ ಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಟ್ಯಾನ್ಸ್‌ಫಾರ್ಮರ್, ವಿದ್ಯುತ್ ಲೈನ್ ಮತ್ತು ಟವರ್ ಅಳವಡಿಕೆ ವೀಕ್ಷಿಸಿದರು.
ಸ್ಥಳದಲ್ಲಿಯೇ ಅಧಿಕಾರಿಗಳು, ರೈತ ಮುಖಂಡರು ಹಾಗೂ ಬಾಳಂಬೀಡ ಮತ್ತು ಸುತ್ತಲಿನ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ ಅವರು, ಯೋಜನೆ ಅನುಷ್ಠಾನ ವಿಳಂಬವಾದರೆ ರೈತ ಸಮೂಹಕ್ಕೆ ಅನಾನುಕೂಲವಾಗಲಿದೆ. ಕೊರೊನಾ ಕಾರಣದಿಂದ ಈಗಾಗಲೇ ಕಾಮಗಾರಿ ತಡವಾಗಿದೆ. ಕೆರೆಗಳು ಭರ್ತಿಯಾಗುವುದರಿಂದ ಜಲಮೂಲವೂ ಪುನಃಶ್ಚೇತನಗೊಂಡು ಕೃಷಿ ಚಟುವಟಿಕೆಗೆ ವರದಾನವಾಗಲಿದೆ ಎಂದರು.
ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಕಾರಣಗಳಿಂದ ರೈತರು ಸರಿಯಾದ ಫಸಲು ಪಡೆಯಲು ಸಾಧ್ಯವಾಗಿಲ್ಲ. ಯೋಜನೆಯ ಅನುಷ್ಠಾನದಿಂದಾದರೂ ರೈತರ ಸಂಕಷ್ಟ ಕೊನೆಗೊಳ್ಳಲಿ. ಈ ನಿಟ್ಟಿನಲ್ಲಿ ಅಧಿ ಕಾರಿಗಳು ಕಾಳಜಿ ವಹಿಸಬೇಕೆಂದು ಸೂಚನೆ ನೀಡಿದರು.
ಬಾಳಂಬೀಡದ ಕೃಷಿ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಕೆಗೆ ಹಿನ್ನಡೆಯಾಗುತ್ತಿದೆ. ರೈತರು ಸಹಕರಿಸಿದರೆ ಆದಷ್ಟು ಬೇಗ ಪೈಪ್‌ಲೈನ್ ಅಳವಡಿಸಲಾಗುವುದು ಎನ್ನುವುದನ್ನು ಸಹಾಯಕ ಎಂಜಿನಿಯರ್ ಪ್ರಹ್ಲಾದ್ ಶೆಟ್ಟಿ ಗಮನಕ್ಕೆ ತರುತ್ತಿದ್ದಂತೆಯೇ, ಇಂಥ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಮಯದಲ್ಲಿ ಅಧಿಕಾರಿಗಳು ಸ್ಥಳೀಯ ಸಮುದಾಯ ಸಮಿತಿಗಳನ್ನು ರಚಿಸಬೇಕು. ಆಗಾಗ, ಸಮಿತಿ ಸಭೆ ನಡೆಸಿ ತೊಂದರೆ, ಅನಾನುಕೂಲಗಳ ಬಗ್ಗೆ ಗಮನ ಸೆಳೆದರೆ ಸಂಬಂಧಿ ಸಿದವರ ಜೊತೆಗೆ ಮಾತನಾಡಿ ತಕ್ಷಣವೇ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದು ಹೇಳಿದರು. ಅಗತ್ಯ ಬಿದ್ದರೆ ನಾನೂ ಕೂಡ ರೈತರೊಂದಿಗೆ ಮಾತನಾಡುವೆ. ಸ್ಥಳೀಯ ಮುಖಂಡರೂ ಆ ಕೆಲಸ ಮಾಡಲಿದ್ದಾರೆ ಎಂದರು.
ಕರ್ನಾಟಕ ನೀರಾವರಿ ನಿಗಮದ ಅಧಿ ಕಾರಿ ಹುಗ್ಗಿ ಮಾತನಾಡಿ, ಯೋಜನೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ವಿದ್ಯುತ್ ಲೈನ್ ಎಳೆಯುವುದು, ಟಾವರ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಕಾರ್ಯಗಳೆಲ್ಲವೂ ಚುರುಕಿನಿಂದ ಸಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಬರುವ ಮಳೆಗಾಲದಲ್ಲಿಯೇ ಯೋಜನೆಯಿಂದ ಪ್ರಾಯೋಗಿಕವಾಗಿ ಕೆರೆಗಳನ್ನು ತುಂಬಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಪ್ರಮುಖರಾದ ಮಂಜಣ್ಣ ತಡಸದ, ಮಾಜಿ ಜಿಪಂ ಸದಸ್ಯ ಮಿಯ್ನಾಜಾನ್ ಕಂಬಳಿ, ಭರಮಣ್ಣ ಶಿವೂರ, ಉಮೇಶ ಗೌಳಿ, ಮಾರುತಿ ದೇವಸೂರ, ಬಸವರಾಜ ಚಲವಾದಿ, ಸಂತೋಷ್ ದುಂಡಣ್ಣನವರ, ಮಾಲತೇಶ ಕಲ್ಲಿಕರೆಣ್ಣನವರ, ಬಸವರಾಜ ಕೆಲವರಕೊಪ್ಪ, ಕೆಂಚಪ್ಪ ಕೊಪ್ಪದ ಮುಂತಾದವರು ಹಾಜರಿದ್ದರು.