ವಾಡಿ: ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಯೋರ್ವ, ತಾಲೂಕು ದಂಡಾಧಿಕಾರಿಗಳಿಗೆ ನೀಡಿದ್ದ ಶರತ್ತುಬದ್ಧ ಮುಚ್ಚಳಿಕೆ ಉಲ್ಲಂಘಿಸಿದ ಪ್ರಕರಣದಲ್ಲಿ ಜಾಮೀನು ನೀಡಿದವನಿಗೆ ಪೊಲೀಸರು 2 ಲಕ್ಷ ರೂ. ದಂಡ ವಿಧಿಸಿದ ಅಪರೂಪದ ಪ್ರಸಂಗ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಲಾಡ್ಲಾಪುರ ಗ್ರಾಮದ ಮೌನೇಶ ಚಂದಪ್ಪ ಕರದಳ್ಳಿ ಎಂಬ ಆರೋಪಿಯನ್ನು ಕಲಂ 107 ಸಿಆರ್‌ಪಿಸಿ ಕಾಯ್ದೆಯಡಿ 2022ರ ಜೂ.23 ರಂದು ಪ್ರಕರಣ ದಾಖಲಾಗಿತ್ತು. ಈತನ ಬಿಡುಗಡೆಗಾಗಿ ಕೋರಿ ಅದೇ ಗ್ರಾಮದ ಸಾಯಬಣ್ಣ ಆನೇಮಿ ಎಂಬುವವರು ತಮ್ಮ 1.33 ಎಕರೆ ಜಮೀನಿನ ಪಹಣಿ ನೀಡುವ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಚಿತ್ತಾಪುರ ತಾಲೂಕು ದಂಡಾಧಿಕಾರಿಗಳು, ಪ್ರಕರಣದ ವಿಚಾರಣೆ ಮುಗಿಯುವ ವರೆಗೆ ಮತ್ತು ಆರು ತಿಂಗಳ ಅವಧಿಯ ವರೆಗೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.
ಇದಕ್ಕೆ ಸಮ್ಮತಿಸಿ ಆರೋಪಿ ಮೌನೇಶ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಆರೋಪಿತನು 2022ನೇ ಸಾಲಿನ ಆ.31 ರಂದು ಕಲಂ 87 ಕೆಪಿ ಕಾಯ್ದೆಯಡಿ ಮತ್ತೊಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಮುಚ್ಚಳಿಕೆ ಪ್ರಮಾಣ ಪತ್ರದ ವಾಗ್ದಾನ ಉಲ್ಲಂಘಿಸಿದ್ದಾನೆ. ಪರಿಣಾಮ ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಲಾಡ್ಲಾಪುರ ಗ್ರಾಮದ ಸಾಯಬಣ್ಣ ಆನೇಮಿ ಎಂಬುವವರಿಗೆ ನೀಡಲಾದ ಜಮೀನಿನ ಉತಾರಿ ಮೇಲೆ 2 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ಆರೋಪಿ ಮೌನೇಶ ಕರದಳ್ಳಿ ವಿರುದ್ಧ 2012ರಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಚಿತ್ತಾಪುರ ಸಿಪಿಐ ಶಿವಾನಂದ ಅಂಬಿಗೇರ, ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುದರ್ಶನ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಆರ್‌ಪಸಿ ಕಲಂ 107ರಡಿ ದಾಖಲಾದ ಪ್ರಕರಣಗಳ ಜಾಮೀನುದಾರರಿಗೆ ದಂಡ ಶಿಕ್ಷೆಯಾಗಿದ್ದು ಅಪರೂಪ ಎಂದು ಹೇಳಲಾಗುತ್ತಿದ್ದು, ಚಿತ್ತಾಪುರ ತಾಲೂಕು ದಂಡಾಧಿಕಾರಿಗಳು ಮತ್ತು ವಾಡಿ ಪೊಲೀಸ್ ಅಧಿಕಾರಿಗಳು ಇಂಥಹದ್ದೊಂದು ದಿಟ್ಟ ಹೆಜ್ಜೆಯಿಡುವ ಮೂಲಕ ಪದೇಪದೆ ದೊಂಬಿ, ಗಲಾಟೆ, ಕೋಮು ಸೌಹಾರ್ಧತೆ ಕದಡುವ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಹಾಗೂ ಹಿಂದೆಮುಂದೆ ಯೋಚಿಸದೆ ಜಾಮೀನು ನೀಡಲು ಮುಂದೆ ಬರುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.