Advertisement

ಸಮಸ್ಯೆ ಮೂಲ ಹುಡುಕಿ, ಹೋರಾಟ ಸಂಘಟಿಸಿ

01:26 PM Aug 19, 2018 | |

ಪುತ್ತೂರು: ರೈತರ ಸಮಸ್ಯೆಯ ಮೂಲ ತಿಳಿದುಕೊಂಡು, ಬಗೆಹರಿಸಲು ಪ್ರಯತ್ನಿಸಬೇಕು. ಬೌದ್ಧಿಕ ಮಟ್ಟದಲ್ಲಿ ಚಿಂತನೆ ಮಾಡಿ, ಹೋರಾಟ ಸಂಘಟಿಸುವ ಅಗತ್ಯ ಇದೆ ಎಂದು ಸ್ವರಾಜ್‌ ಇಂಡಿಯಾದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್‌ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಆ. 18ರಂದು ಇಲ್ಲಿನ ಲಯನ್ಸ್‌ ಸೇವಾ ಮಂದಿರದಲ್ಲಿ ನಡೆದ ದ.ಕ. ಜಿಲ್ಲಾ ತಾಲೂಕು ಘಟಕದ ಪದಗ್ರಹಣ ಹಾಗೂ ಕೇಂದ್ರ, ರಾಜ್ಯ ಸರಕಾರಕ್ಕೆ ಜಿಲ್ಲೆಯ ರೈತರ ಹಕ್ಕೊತ್ತಾಯ, ಮುಂದಿನ ಹೋರಾಟದ ನಿಲುವುಗಳ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ರೈತರ ಸಮಸ್ಯೆಗಳಿಗೆ ಪರಿಹಾರ, ಬೇಡಿಕೆಗಳ ಈಡೇರಿಕೆಗೆ ಸಮಸ್ಯೆಯ ಮೂಲ ಬೇರನ್ನು ಹುಡುಕಬೇಕು. ಆರ್ಥಿಕ ಹಿನ್ನಡೆ, ಸಾಂಸ್ಕೃತಿಕ ಹಿನ್ನಡೆ, ಗುರುತು ನಾಶ, ರೈತ ಸಂಸ್ಕೃತಿ, ಆಹಾರ ಸಂಸ್ಕೃತಿ, ದೇಶದ ಸಂಸ್ಕೃತಿ ನಾಶ ಆಗುತ್ತಿದೆ. ಪ್ರಧಾನಿಯೂ ರೈತರ ಸಮಸ್ಯೆಗೆ ಪರಿಹಾರ ನೀಡಲಾರದ ಸ್ಥಿತಿಗೆ ತಲುಪಿದೆ. ನವ ಉದಾರೀಕರಣ ನೀತಿಯಂತಹ ಸ್ಥಿತಿಗಳು ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈ ಎಲ್ಲ ಸಮಸ್ಯೆಗಳ ಮೂಲ ಹುಡುಕುವಲ್ಲಿ ನಾವು ವಿಫಲ ಆಗಿದ್ದೇವೆ. ಈ ನಿಟ್ಟಿನಲ್ಲಿ ಆಲೋಚನೆ ಮಾಡಿ, ಹೋರಾಟ ಸಂಘಟಿಸುವ ಅಗತ್ಯ ಇದೆ ಎಂದರು.

ಹೋರಾಟ ವಿಸ್ತರಣೆ
ಇಂದು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದಂತೆ ಉದ್ಯೋಗ ಸೃಷ್ಟಿಗೂ ಹಿನ್ನಡೆ ಆಗಿದೆ. ನಿಜವಾಗಿಯೂ ಉದ್ಯೋಗ ಸೃಷ್ಟಿ ಆದದ್ದು ಕೃಷಿ ಕ್ಷೇತ್ರದಿಂದ. ವಿಶ್ವಸಂಸ್ಥೆ ಪ್ರಕಾರ ಶೇ. 65ರಷ್ಟು ಉದ್ಯೋಗ ಸೃಷ್ಟಿ ಆಗುವುದು ಕೃಷಿಯಿಂದಲೇ. ಆದರೆ ಇಂದು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರಗಳಿಗೆ ಲಕ್ವ ಹೊಡೆದಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಹುಡುಕುವ ಹಿನ್ನೆಲೆಯಲ್ಲಿ, ಹೋರಾಟವನ್ನು ವಿಸ್ತರಿಸಿಕೊಳ್ಳಬೇಕಾಗಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಜಿಲ್ಲಾಧ್ಯಕ್ಷ ರವಿಕಿರಣ್‌ ಪುಣಚ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದ.ಕ. ಜಿಲ್ಲಾ, ತಾಲೂಕು ಘಟಕಗಳ ಪದಗ್ರಹಣ ಸಮಾರಂಭವನ್ನು ಸ್ವರಾಜ್‌ ಇಂಡಿಯಾದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್‌ ಅವರು ಸಂಘದ ಪದಾ ಧಿಕಾರಿಗಳಿಗೆ ರೈತ ಸಂಘದ ಹಸಿರು ನಿಶಾನೆಯ ಬಾವುಟ ಹಸ್ತಾಂತರಿಸುವ ಮೂಲಕ ನೆರವೇರಿಸಿದರು.

ಬಳಿಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋ ಧಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಾಪುರ ನಾಗೇಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ. ರಾಮು ಚೆನ್ನಪಟ್ಟಣ, ದ.ಕ. ಜಿಲ್ಲಾ ದಲಿತ್‌ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಕರ್ನಾಟಕ ಅಂಬೇಡ್ಕರ್‌ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಕೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಹಿರಿಯ ರೈತ ಹೋರಾಟಗಾರ ಡಾ| ಪಿ.ಕೆ.ಎಸ್‌. ಭಟ್‌, ಇ.ಎಸ್‌.ಐ. ಆಸ್ಪತ್ರೆಯ ಕುಂದು ಕೊರತೆಗಳ ಸಮಿತಿ ಸದಸ್ಯ ಸುದತ್ತ ಜೈನ್‌ ಶಿರ್ತಾಡಿ, ಕಸ್ತೂರಿ ರಂಗನ್‌ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಭಟ್‌, ರಾಜ್ಯ ರೈತ ಸಂಘದ ಕಚೇರಿ ಕಾರ್ಯದರ್ಶಿ ಗೋಪಾಲ್‌, ಖಾಯಂ ಸದಸ್ಯ ಲೋಕೇಶ್‌ ರಾಜ್‌ ಅರಸ್‌ ಉಪಸ್ಥಿತರಿದ್ದರು.

Advertisement

ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಟ್‌ ಕೊಜಂಬೆ ಸ್ವಾಗತಿಸಿ, ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಪವಿತ್ರಾ ಮತ್ತು ಬಳಗದವರು ರೈತ ಗೀತೆ, ಹೋರಾಟ ಗೀತೆ ಹಾಡಿದರು.

ಅತಂತ್ರವಾಗಿದೆ
ರೈತರ ಆತ್ಮಹತ್ಯೆ ನಡೆಯುತ್ತಾ, ಇಂದು ಸಾಮಾನ್ಯ ವಿಷಯ ಎಂಬಂತಾಗಿದೆ. ಕೃಷಿ ಕುಟುಂಬದ ಹುಡುಗಿಯನ್ನು ಇನ್ನೋರ್ವ ರೈತನಿಗೆ ನೀಡಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣ ಆಗಿದೆ. ರೈತರ ಸ್ಟೇಟಸ್‌ಗೆ ಧಕ್ಕೆ ಆಗಿದೆ. ರೈತ ಸಮುದಾಯ ಬೀದಿಗೆ ಬೀಳುವಂತೆ ಆಗಿದೆ. ಶ್ರಮಿಕ ವರ್ಗ, ಗ್ರಾಮೀಣ ವರ್ಗದವರು, ಬೆವರು ಸುರಿಸುವ ರೈತ ಸಮುದಾಯ ಇಂದು ಅತಂತ್ರವಾಗಿದೆ. ಇದು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಿದೆ ಎಂದು ಪಾಟೀಲ್‌ ವಿಷಾದ ವ್ಯಕ್ತಪಡಿಸಿದರು.

ಅಗಲಿದ ಗಣ್ಯರಿಗೆ ಸಂತಾಪ
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ರೈತ ಮುಖಂಡ ಕೆ.ಎಸ್‌. ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಕೋರಿ ಮೌನ ಪ್ರಾರ್ಥನೆ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next